ಕೊರೋನಾ ಎಫೆಕ್ಟ್.. ಪಾಕ್ ಕ್ರಿಕೆಟ್ ತಂಡಕ್ಕಿಲ್ಲ ಪ್ರಾಯೋಜಕರು…!
ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ದುಡ್ಡಿಲ್ಲ. ಕೊರೋನಾ ವೈರಸ್ನಿಂದಾಗಿ ಪಾಕ್ ಕ್ರಿಕೆಟ್ಗೆ ಪ್ರಾಯೋಜಕರೇ ಇಲ್ಲದಂತಾಗಿದೆ. ಹಿಂದಿನ ಪ್ರಾಯೋಜಕರ ಒಪ್ಪಂದದ ಅವಧಿಯೂ ಮುಗಿದು ಹೋಗಿದೆ. ಹೊಸ ಪ್ರಾಯೋಜಕರಿಗಾಗಿ ಬಿಡ್ಡಿಂಗ್ ಮಾಡಿದ್ರೂ ಯಾರು ಕೂಡ ಮುಂದೆ ಬಂದಿಲ್ಲ. ಈ ಹಿಂದಿನ ಪ್ರಾಯೋಜಕರು ಕಡಿಮೆ ದುಡ್ಡಿಗೆ ಒಪ್ಪಂದ ಮಾಡಲು ಮುಂದೆ ಬಂದಿದ್ದಾರೆ. ಹೀಗಾಗಿ ಪಾಕ್ ಕ್ರಿಕೆಟ್ ತಂಡ ಪ್ರಾಯೋಜಕರಿಲ್ಲದೇ ಮುಂಬರುವ ಇಂಗ್ಲೆಂಡ್ ಪ್ರವಾಸವನ್ನು ಮಾಡಬೇಕಾದ ದುಸ್ಥಿತಿಗೆ ಬಂದಿದೆ.
ಮೊದಲೇ ಪಾಕ್ ಕ್ರಿಕೆಟ್ ಮಂಡಳಿಯ ಬೊಕ್ಕಸ ಖಾಲಿಯಾಗಿದೆ. ಉಗ್ರರ ಕರಿನೆರಳಿನಿಂದಾಗಿ ಪಾಕ್ ನೆಲದಲ್ಲಿ ಯಾವ ರಾಷ್ಟ್ರ ಕೂಡ ಕ್ರಿಕೆಟ್ ಆಡಲು ಒಪ್ಪುತ್ತಿಲ್ಲ. ಇದ್ರಿಂದ ತಟಸ್ಥ ತಾಣದಲ್ಲಿ ಟೂರ್ನಿಗಳನ್ನು ಸಂಘಟಿಸುವ ಮೂಲಕ ಪಾಕ್ ಕ್ರಿಕೆಟ್ ಮಂಡಳಿಯು ತನ್ನ ದೇಶದಲ್ಲಿ ಕ್ರಿಕೆಟ್ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಇದೀಗ ಕೊರೋನಾ ವೈರಸ್ ಪಾಕ್ನ ಆರ್ಥಿಕತೆಗೆ ಭಾರೀ ಹೊಡೆತವನ್ನೇ ನೀಡಿದೆ.
ಇನ್ನು ಇಂಗ್ಲೆಂಡ್ ಪ್ರವಾಸದ ವೇಳೆ ಪಾಕ್ ಕ್ರಿಕೆಟ್ ಆಟಗಾರರ ಕ್ರಿಟ್ ಮೇಲೆ ಶಾಹೀದ್ ಆಫ್ರಿದಿ ಪೌಂಡೇಶನ್ನ ಲೋಗೋ ರಾರಾಜಿಸಲಿದೆ. ಈ ವಿಷಯವನ್ನು ಸ್ವತಃ ಶಾಹೀದ್ ಆಫ್ರಿದಿ ಅವರೇ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಶಾಹೀದ್ ಆಫ್ರಿದಿ ಪೌಂಡೇಶನ್ ಲೋಗೋ ಪಾಕಿಸ್ತಾನ ಕ್ರಿಕೆಟಿಗರ ಕಿಟ್ನಲ್ಲಿ ಕಾಣಬಹುದು. ಯಾಕಂದ್ರೆ ನಾವು ಚಾರಿಟಿ ಪಾಟ್ನರ್ಗಳಾಗಿದ್ದೇವೆ. ವಾಸೀಮ್ ಖಾನ್ ಮತ್ತು ಪಿಸಿಬಿಗೆ ಧನ್ಯವಾದಗಳು. ಇದೇ ರೀತಿಯ ಬೆಂಬಲ ಮುಂದೆಯೂ ಇರಲಿ. ಪಾಕ್ ತಂಡದ ಆಟಗಾರರಿಗೆ ಆಲ್ ದಿ ಬೆಸ್ಟ್ ಅಂತ ಶಾಹೀದ್ ಆಫ್ರಿದಿ ತನ್ನ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಪಾಕಿಸ್ತಾನ ಈಗಾಗಲೇ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದೆ. ಅಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಿದೆ. ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳನ್ನು ಪಾಕಿಸ್ತಾನ ಆಡಲಿದೆ. ಒಟ್ಟಿನಲ್ಲಿ ಪಾಕ್ ಕ್ರಿಕೆಟ್ ಮಂಡಳಿ ಈಗ ಪ್ರಾಯೋಜಕರಿಲ್ಲದೇ ಆಟಗಾರರ ಖರ್ಚು ವೆಚ್ಚಗಳನ್ನು ಭರಿಸಬೇಕಿದೆ. ಅದೇ ರೀತಿ ದೇಸಿ ಕ್ರಿಕೆಟ್ನ ಖರ್ಚು ವೆಚ್ಚಗಳನ್ನು ನೋಡಬೇಕಾಗಿದೆ. ಒಟ್ಟಾರೆ, ಪಾಕ್ ಕ್ರಿಕೆಟ್ ಮಂಡಳಿಗೆ ಪ್ರಾಯೋಜಕರ ಕೊರತೆ ಕಾಡುತ್ತಿದೆ. ಈ ನಡುವೆ ಶಾಹೀದ್ ಆಫ್ರಿದಿ ಪೌಂಡೇಶನ್ ಜೊತೆಗೆ ಪಾಕ್ ಕ್ರಿಕೆಟ್ ಮಂಡಳಿಯು ಎರಡು ವರ್ಷಗಳ ಒಪ್ಪಂದವನ್ನೂ ಮಾಡಿಕೊಂಡಿದೆ.