ಪಾಕಿಸ್ತಾನದ ಖ್ಯಾತ ಮಾಜಿ ಅಂಪೈರ್ ಅಸಾದ್ ರೌಫ್ ನಿಧನ…
13 ವರ್ಷಗಳಲ್ಲಿ 231 ಅಂತರಾಷ್ಟ್ರೀಯ ಪಂದ್ಯಗಳಿಗೆ ಅಂಪೈರಿಂಗ್ ಮಾಡಿದ್ದ ಪಾಕಿಸ್ತಾನದ ಮಾಜಿ ಐಸಿಸಿ ಎಲೈಟ್ ಅಂಪೈರ್ ಅಸಾದ್ ರೌಫ್ ಅವರು ಲಾಹೋರ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. 2000ನೇ ಇಸವಿಯಲ್ಲಿ ಅಂಪೈರಿಂಗ್ ಆರಂಭಿಸಿದ ರೌಫ್, 2006ರಲ್ಲಿ ಐಸಿಸಿಯ ಎಲೈಟ್ ಪ್ಯಾನೆಲ್‌ಗೆ ಬಡ್ತಿ ಪಡೆದಿದ್ದರು.
ಅವರ ಸಾವಿನ ಬಗ್ಗೆ ಅವರ ಸಹೋದರ ತಾಹಿರ್ ರೌಫ್ ಸ್ಪಷ್ಟಪಡಿಸಿದ್ದು, ಅಸಾದ್ ರೌಫ್ ಅವರು ಲಾಹೋರ್‌ನಲ್ಲಿ ತಮ್ಮ ಅಂಗಡಿಯನ್ನು ಮುಚ್ಚಿ ಮನೆಗೆ ಹಿಂದಿರುಗುತ್ತಿದ್ದಾಗ, ಅವರಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಪಾಕಿಸ್ತಾನಿ ಆಟಗಾರರು ಐಪಿಎಲ್‌ನಲ್ಲಿ ಆಡುವುದನ್ನು ನಿಷೇಧಿಸಿದ ನಂತರವೂ ರೌಫ್ ಐಪಿಎಲ್‌ನಲ್ಲಿ ಅಂಪೈರ್ ಆಗಿದ್ದರು. ಆದರೆ 2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿ ಬಂದ ನಂತರ IPL ಮದ್ಯದಲ್ಲಿ ಭಾರತ ತೊರೆದಿದ್ದರು. ಅದೇ ವರ್ಷ ಅವರನ್ನ ಚಾಂಪಿಯನ್ಸ್ ಟ್ರೋಫಿ ಮತ್ತು ಐಸಿಸಿಯ ಅಂತಾರಾಷ್ಟ್ರೀಯ ಅಂಪೈರ್‌ಗಳ ಸಮಿತಿಯಿಂದ ಕೈಬಿಡಲಾಯಿತು.
ನಿಷೇಧದ ನಂತರ ರೌಫ್ ಲಾಹೋರ್‌ನಲ್ಲಿ ಬಟ್ಟೆ ಮತ್ತು ಪಾದರಕ್ಷೆಗಳ ಅಂಗಡಿಯನ್ನು ನಡೆಸುತ್ತಿದ್ದರು.
ರೌಫ್ 2006 ರಿಂದ 2013 ರವರೆಗೆ ಐಸಿಸಿಯ ಎಲೈಟ್ ಅಂಪೈರ್ ಪ್ಯಾನೆಲ್‌ನ ಸದಸ್ಯರಾಗಿದ್ದರು. ಅವರು 231 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಇದರಲ್ಲಿ 64 ಟೆಸ್ಟ್, 28 ಟಿ20 ಮತ್ತು 139 ಏಕದಿನ ಪಂದ್ಯಗಳು ಸೇರಿವೆ. ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದ ನಂತರ 2013 ರಲ್ಲಿ ಎಲ್ಲಾ ರೀತಿಯ ಅಂಪೈರಿಂಗ್‌ನಿಂದ ನಿವೃತ್ತರಾಗಿದ್ದರು.






