ಪಂಜಶೀರ್ ಮೇಲೆ ಡ್ರೋನ್ ದಾಳಿ ನಡೆಸಿದ ಪಾಕಿಸ್ತಾನದ ವಿರುದ್ಧ ಕಾಬುಲ್ ನಲ್ಲಿ ಪ್ರತಿಭಟನೆ
ಅಫ್ಗಾನಿಸ್ತಾನ : ತಾಲಿಬಾನಿಗಳ ಹುಟ್ಟಡಿಗಿಸಿ ಕಡೆವರೆಗೂ ಅವರ ವಿರುದ್ಧ ಹೋರಾಟ ನಡೆಸಿದ್ದ ಪಂಜ ಶೀರ್ ಯೋಧರ ಮೇಲೆ ತಾಲಿಬಾನಿಗಳು ಪಾಕಿಸ್ತಾನ ಸಹಾಯದಿಂದ ದಾಳಿ ನಡೆಸಿ ಪಂಜಶೀರ್ ವಶಕ್ಕೆ ಪಡೆದುಕೊಂಡಿದ್ದಾರೆ. ಪಾಕಿಸ್ತಾನದ ಡ್ರೋನ್ ದಾಳಿಯ ವಿರುದ್ಧ ಇದೀಗ ಕಾಬುಲ್ ನಲ್ಲಿ ಉಗ್ರ ಹೋರಾಟ ನಡೆಯುತ್ತಿದೆ. ಅಫ್ಗಾನಿಸ್ತಾನದ ಪಂಜ್‌ಶಿರ್‌ನಲ್ಲಿ ಪಾಕಿಸ್ತಾನ ಬಾಂಬ್ ದಾಳಿ ನಡೆಸಿದೆ ಎಂದು ಆರೋಪಿಸಿ ಕಾಬೂಲ್‌ನಲ್ಲಿ ನೂರಾರು ಮಂದಿ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಕಾಬೂಲ್ ನಲ್ಲಿರುವ ಪಾಕಿಸ್ತಾನ ದೂತಾವಾಸ ಕಚೇರಿ ಎದುರು ಪ್ರತಿಭಟನೆ ನಡೆಸಿದ ಯುವಕ ಯುವತಿಯರು, ಅಫ್ಗಾನಿಸ್ತಾನದಲ್ಲಿ ಕೈಗೊಂಬೆ ಸರ್ಕಾರ ಬೇಡ. ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಅಫ್ಗಾನಿಸ್ತಾನದ ಜನರು ತಾಲಿಬಾನ್ ವಿರುದ್ಧ ಒಗ್ಗೂಡಬೇಕು ಎಂದು ಪಂಜ್‌ಶಿರ್‌ನಲ್ಲಿ ಹೋರಾಡುತ್ತಿರುವ ಪ್ರತಿರೋಧ ಪಡೆಯ ಸಹ ನಾಯಕ ಅಹ್ಮದ್ ಮಸೂದ್ ಕರೆ ನೀಡಿದ ಬೆನ್ನಲ್ಲೇ ಕಾಬೂಲ್‌ನಲ್ಲಿ ಜನರು ಜಮಾಯಿಸಿ ಹೋರಾಟ ನಡೆಸಿರುವುದಾಗಿ ವರದಿಯಾಗಿದೆ.
ಅಷ್ಟೇ ಅಲ್ದೇ ಪಾಕಿಸ್ತಾನಕ್ಕೆ ಸಾವಾಗಲಿ ಎಂಬ ಘೋಷಣೆಗಳನ್ನು ಕೂಗಿ ಅಫ್ಗಾನಿಸ್ತಾನದಲ್ಲಿರುವ ಪಾಕಿಸ್ತಾನ ದೂತಾವಾಸ ಕಚೇರಿಯನ್ನು ಮುಚ್ಚಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೂ ಪ್ರತಿಭಟನಾಕಾರರನ್ನು ನಿಯಂತ್ರಿಸಲು ತಾಲಿಬಾನ್ ಹೋರಾಟಗಾರರು ಗಾಳಿಯಲ್ಲಿ ಗುಂಡು ಹಾರಿಸಿದರೂ ಕೂಡ ಪ್ರತಿಭಟನಾಕಾರರು ಜಗ್ಗದೇ ಹೋರಾಟ ಮಾಡಿದ್ದಾರೆ ಎನ್ನಲಾಗಿದೆ.








