ಪಾಪು ಎಂಬ ಕಾವ್ಯನಾಮದಿಂದಲೇ ಖ್ಯಾತರಾದ ಪಾಟೀಲ ಪುಟ್ಟಪ್ಪ ಅನುಭವಿ ಪತ್ರಕರ್ತ, ಸಂಪಾದಕ, ಕನ್ನಡ ಹೋರಾಟಗಾರ.
ಧಾರವಾಡ ಜಿಲ್ಲೆಯ ಹಾವೇರಿ ತಾಲೂಕಿನ ಕುರುಬಗೊಂಡ ಗ್ರಾಮದಲ್ಲಿ 1919 ಜನವರಿ 14ರಂದು ಜನಿಸಿದ ಪಾಟೀಲ ಪುಟ್ಟಪ್ಪ ಕನ್ನಡ ಸಾಹಿತ್ಯ ಮತ್ತು ಪತ್ರಿಕಾ ರಂಗದಲ್ಲಿ ಬಹುದೊಡ್ಡ ಹೆಸರು ಗಳಿಸಿದವರು. ಕನ್ನಡ ನಾಡು, ನುಡಿಗಾಗಿ ಜೀವನದುದ್ದಕ್ಕೂ ಶ್ರಮಿಸಿದವರು.
ಕರ್ನಾಟಕ ಕಾಲೇಜಿನಲ್ಲಿ ಪದವಿ. ಬೆಳಗಾವಿಯಲ್ಲಿ ಕಾನೂನು ಅಧ್ಯಯನ.1949ರಲ್ಲಿ ಕ್ಯಾಲಿಫೋರ್ನಿಯಾದ ಸ್ಟೇಟ್ ಯೂನಿವರ್ಸಿಟಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪಾಟೀಲ ಪುಟ್ಟಪ್ಪ, ಅಮೆರಿಕದಿಂದ ಮರಳಿದ ನಂತರ ನವಯುಗ ಮಾಸಪತ್ರಿಕೆಯ ಸಂಪಾದಕತ್ವ ವಹಿಸಿಕೊಂಡರು.
ಡಾ. ಪಾಟೀಲ ಪುಟ್ಟಪ್ಪ ಅವರು ಒಬ್ಬ ಅಪ್ರತಿಮ ಹೋರಾಟಗಾರ, ನಿರ್ಭೀತ ಹಾಗೂ ಧೀಮಂತ ಪತ್ರಕರ್ತರಾಗಿದ್ದವರು. ಸುಸಂಸ್ಕೃತ ಮನಸ್ಸೊಂದು ಹೇಗಿರಬೇಕೆಂಬುದಕ್ಕೆ ನಾಡೋಜ ಪಾಟೀಲ ಪುಟ್ಟಪ್ಪನವರು ಒಂದು ಜೀವಂತ ಉದಾಹರಣೆಯಾಗಿದ್ದವರು.
1954 ರಲ್ಲಿ ‘ಪ್ರಪಂಚ’ ಎಂಬ ವಾರಪತ್ರಿಕೆಯನ್ನು ತನ್ನ ಸಂಪಾದಕತ್ವದಲ್ಲಿ ನಡೆಸಿ, 1962 ರಿಂದ 1974ರವರೆಗೆ ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿ
ಆಯ್ಕೆಯಾದವರು.
ಡಾ. ಪಾಟೀಲ ಪುಟ್ಟಪ್ಪ 1947ರಲ್ಲಿ ವಿಶಾಲ ಕರ್ನಾಟಕ, 1952ರಲ್ಲಿ ನವಯುಗ, 1954ರಲ್ಲಿ ಪ್ರಪಂಚ ಸಾಪ್ತಾಹಿಕ, 1956ರಲ್ಲಿ ಸಂಗಮ ಮಾಸಿಕ, 1959ರಲ್ಲಿ ವಿಶ್ವವಾಣಿ ದೈನಿಕ, 1961ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, 1964ರಲ್ಲಿ ಸ್ತ್ರಿ ಮಾಸಿಕ ಮುಂತಾದ ಹಲವಾರು ಪತ್ರಿಕೆಗಳ ಸಂಪಾದಕತ್ವ ವಹಿಸಿಕೊಂಡಿದ್ದರು. ನಂತರ ಕನ್ನಡ ಭಾಷಾ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು. ಧಾರವಾಡದ ವಿದ್ಯಾವರ್ಧಕ ಸಂಘವನ್ನು ವಿಸ್ತಾರವಾಗಿ ಬೆಳೆಸುವಲ್ಲಿ ಪುಟ್ಟಪ್ಪ ಅವರ ಪಾತ್ರ ಗಣನೀಯ.
ಕನ್ನಡ ಪರ ಹೋರಾಟ, ಕಾಳಜಿಗಳಿಂದ ಜನಮಾನಸದಲ್ಲಿ ನೆಲೆಯಾದ ಇವರು 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡದ ಅಸ್ಮಿತೆಗಾಗಿ ಹೋರಾಟದಲ್ಲಿ ತೊಡಗಿಸಿ ಕೊಂಡಿದ್ದ ಪಾಪು ಸೋಮವಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ರಾತ್ರಿ 10.10ಕ್ಕೆ ನಿಧನರಾಗಿದ್ದಾರೆ. ನಾಡೋಜ ಪಾಪು ಅವರು, ವಿಪರೀತ ಜ್ವರ, ಉಸಿರಾಟ ತೊಂದರೆ ಹಾಗೂ ಆಯತಪ್ಪಿ ಬಿದ್ದ ಪರಿಣಾಮ ತಲೆಗೆ ಪೆಟ್ಟಾಗಿ ಫೆಬ್ರವರಿ10 ರಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಿಡ್ನಿ ತೊಂದರೆ, ರಕ್ತ ಹೀನತೆ ಹಾಗೂ ಸೋಂಕು ಕಂಡು ಬಂದಿದ್ದು, ಎಲ್ಲಾ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆ ನಂತರ ಆರೋಗ್ಯ
ಗಂಭೀರವಾಗಿದ್ದು, ಕಳೆದ ನಾಲ್ಕು ದಿನಗಳಿಂದ ವೆಂಟಿಲೇಟರ್ ಅಳವಡಿಸಲಾಗಿತ್ತು. ದೀರ್ಘ ಕಾಲ ಹಾಸಿಗೆ ಹಿಡಿದ ಪರಿಣಾಮ ಪಲ್ಮನರಿ ಥ್ರಂಬೋ ಎಂಬೋಲಿಸಂ ಆಗಿತ್ತು.
ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯಲೋಕದ ಬಹುದೊಡ್ಡ ಕೊಂಡಿಯೊಂದು ಕಳಚಿಕೊಂಡಿದೆ.
ತಮ್ಮ ಕೊನೆಯ ದಿನಗಳವರೆಗೂ ವೃತ್ತಿ ಪ್ರೀತಿಯನ್ನು ಉಳಿಸಿಕೊಂಡಿದ್ದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಪಾರ್ಥಿವ ಶರೀರವನ್ನು ವಿಶ್ವೇಶ್ವರ ನಗರದ ಅವರ ನಿವಾಸ ‘ಪ್ರಪಂಚ’ ದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದೆ. ನಂತರ ಹಾವೇರಿಯ ರಾಣೇಬೆನ್ನೂರು ತಾಲೂಕಿನ ಸ್ವಗ್ರಾಮ ಹಲಗೇರಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು.








