ಈ ವರ್ಷ ಶಾಲೆ ತೆರೆಯುವುದೇ ಬೇಡ ದೆಹಲಿಯಲ್ಲಿ ಪೋಷಕರ ಒತ್ತಾಯ
ಹೊಸದಿಲ್ಲಿ, ಜೂನ್ 11: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ದಿನೇ ದಿನೇ ಕೊರೊನಾ ಪ್ರಕರಣಗಳು ಏರುಗತಿಯಲ್ಲಿ ಏರಿಕೆಯಾಗುತ್ತಿದೆ. ಈಗಾಗಲೇ ಡಿಸಿಎಂ ಮನಿಷ್ ಸಿಸೊಡಿಯಾ ಜುಲೈ ಅಂತ್ಯದ ವೇಳೆಗೆ ದೆಹಲಿಯಲ್ಲಿ 5.5 ಲಕ್ಷ ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಕೊರೊನಾ ಸೋಂಕು ಸಮುದಾಯಕ್ಕೆ ಹಬ್ಬಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಇದರ ನಡುವೆ ಹೊಸ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸುವ ಬಗ್ಗೆ ಚರ್ಚೆಗಳು ಶುರುವಾಗಿದ್ದು, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಈ ವರ್ಷವನ್ನು ಝೀರೋ ಅಕಾಡೆಮಿಕ್ ಇಯರ್ ಎಂದು ಘೋಷಿಸಲು ಪೋಷಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶಾಲೆಗಿಂತ ಮಕ್ಕಳ ಆರೋಗ್ಯ ಮುಖ್ಯವಾಗಿದೆ. ಕೊರೋನಾ ರಾಜ್ಯದಲ್ಲಿ ವ್ಯಾಪಕವಾಗಿ ಹರಡಿರುವ ಕಾರಣ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಈ ವರ್ಷ ಶಾಲೆಗಳನ್ನು ತೆರೆಯುವುದೇ ಬೇಡ ಎಂದು ಶಿಕ್ಷಕರು ಮತ್ತು ಪೋಷಕರು ದೆಹಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈಗಾಗಲೇ ದೆಹಲಿಯಲ್ಲಿ 100ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರಲ್ಲಿ ನಾಲ್ವರನ್ನು ಕೊರೊನಾ ವೈರಸ್ ಬಲಿ ತೆಗೆದುಕೊಂಡಿದೆ. ಹೀಗಿರುವಾಗ ಶಾಲೆ ತೆರೆಯುವುದು ಸರಿಯಲ್ಲ ಎನ್ನುವುದು ದೆಹಲಿ ಸರ್ಕಾರಿ ಶಾಲಾ ಶಿಕ್ಷಕರ ಸಂಘದ ಅಭಿಪ್ರಾಯ.
ಇಸ್ರೇಲ್ ನಲ್ಲಿ ಶಾಲೆಗಳನ್ನು ಪುನರಾರಂಭಿಸಿದ ಕಾರಣಕ್ಕೆ ಕೊರೊನಾ ಸೋಂಕು ಹೇಗೆ ಮತ್ತಷ್ಟು ವ್ಯಾಪಕವಾಗಿ ಹರಡಿ ಸಂಕಷ್ಟಕ್ಕೆ ಕಾರಣವಾಯಿತು ಎಂಬ ಪಾಠ ನಮ್ಮ ಕಣ್ಣ ಮುಂದಿದೆ. ಇಂತಹ ಪರಿಸ್ಥಿತಿಯಲ್ಲಿ ದೆಹಲಿಯಲ್ಲಿ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸುವುದು ಅನಾಹುತಗಳಿಗೆ ದಾರಿ ಮಾಡಿಕೊಟ್ಟಂತೆ. ಭಾರತದಲ್ಲಿ ಶಾಲೆಗಳನ್ನು ಪುನರಾರಂಭಿಸಿದರೆ ಏನಾಗಲಿದೆ ಎಂಬುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ದೆಹಲಿ ಸರ್ಕಾರಿ ಶಾಲಾ ಶಿಕ್ಷಕರ ಸಂಘ ಮತ್ತು ದೆಹಲಿಯ ವಿವಿಧ ಶಾಲೆಗಳಲ್ಲಿನ ಪೋಷಕರ ಸಂಘಗಳು ಆತಂಕ ವ್ಯಕ್ತಪಡಿಸಿವೆ.