ಪೋಷಕರೆ…. ಈ ವಿಷಯಗಳನ್ನ ಮಕ್ಕಳ ಮುಂದೆ ಹಂಚಿಕೊಳ್ಳಬೇಡಿ..
ಮಕ್ಕಳ ವಯಸ್ಸಿನ ಆಧಾರದ ಮೇಲೆ ತಿಳಿಸಬೇಕಾದ ವಿಷಯಗಳನ್ನಷ್ಟೆ ಹಂಚಿಕೊಳ್ಳಿ. ಇಲ್ಲದಿದ್ದರೆ ನಕಾರಾತ್ಮಕ ವಿಷಯಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಇದು ಅವರ ನಡವಳಿಕೆಯಲ್ಲಿ ಗೋಚರಿಸುತ್ತದೆ.
ಮಕ್ಕಳು ಓದು ಬರಹದಲ್ಲಿ ಚುರುಕು, ಮಾತಿನಲ್ಲಿ ಲವಲವಿಕೆ, ಕ್ರೀಡೆಯಲ್ಲಿ ಕ್ರಿಯಾಶೀಲರಾಗಿರುತ್ತಾರೆ ನಿಜ, ಆದರೆ ಇದರ ಹೊರತಾಗಿಯೂ, ಅವರಿಗೆ ಪ್ರಾಪಂಚಿಕ ತಿಳುವಳಿಕೆ ಮತ್ತು ಅನುಭವದ ಕೊರತೆ ಇರುತ್ತೆ. ಅದಕ್ಕಾಗಿಯೇ ನೀವು ಅನೇಕ ವಿಚಯಗಳನ್ನ ಮಕ್ಕಳಿಂದ ಮರೆಮಾಚಬೇಕಾಗಿದೆ. ಮಕ್ಕಳು ಹದಿಹರೆಯಕ್ಕೆ ಕಾಲಿಡುವ ಮೊದಲು ನೀವು ಕೆಲವೊಂದು ವಿಷಯಗಳನ್ನ ಹಂಚಿಕೊಳ್ಳುವುದು ನಿಲ್ಲಿಸಿ.
ಹಣಕಾಸಿನ ಸಮಸ್ಯೆಗಳು
ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಎದುರಾದರೆ ಮಕ್ಕಳ ಮುಂದೆ ಮತ್ತೆ ಮತ್ತೆ ಹೇಳಿಕೊಳ್ಳಬೇಡಿ. ಇದು ಮಕ್ಕಳ ಮನಸ್ಸಿನ ಮೇಲೆ ಉದ್ದೇಶಪೂರ್ವಕವಲ್ಲದ ಭಾರವನ್ನು ಉಂಟುಮಾಡುತ್ತದೆ. ಜಮೀನು -ಆಸ್ತಿ ವಿವಾದಗಳು ಅಥವಾ ಹಣಕಾಸಿನ ಅಡಚಣೆಗಳ ವಿಷಯವನ್ನು ಸಹ ಮಕ್ಕಳೊಂದಿಗೆ ಹಂಚಿಕೊಳ್ಳಬಾರದು. ಇದು ಮಗುವಿನ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ, ಮನೆಯಲ್ಲಿ ಇಲ್ಲದ ಆತಂಕದ ವಾತಾವರಣ ಹೆಚ್ಚಾಗುತ್ತದೆ.
ಸಂಬಂಧಿಕರ ಜಗಳ
ಮಕ್ಕಳ ಮುಂದೆ ನಿಮ್ಮ ಆಪ್ತರು ಅಥವಾ ಕುಟುಂಬದ ಸದಸ್ಯರ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡಬೇಡಿ. ನಿಮಗೆ ಯಾರ ಜೊತೆಗಾದರೂ ಹೊಂದಿಕೆಯಾಗದಿದ್ದರೇ ಇದನ್ನ ನಿಮ್ಮ ಮಕ್ಕಳ ಮೇಲೆ ಹೇರಬೇಡಿ. ಇದು ಅವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನೀವು ಇತರರನ್ನ ಹೇಗೆ ಚಿತ್ರಿಸುತ್ತೀರೋ ಮಕ್ಕಳು ಅದೇ ರೀತಿ ಯೋಚಿಸುತ್ತಾರೆ. ಪರಿಣಾಮ, ಮಕ್ಕಳೂ ಸಹ ಅವರ ಮೇಲೆ ಕೆಟ್ಟ ಮನೊಭಾವನೆಯನ್ನ ಹೊಂದುತ್ತಾರೆ. ಸಂಬಂಧಿಕರೊಂದಿಗೆ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸುತ್ತಾರೆ. ಇದರಿಂದ ಜನರೊಂದಿಗೆ ನಿಮ್ಮ ಸಂಬಂಧ ಹಾಳಾಗುವುದಲ್ಲದೇ ಮಕ್ಕಳ ಮೇಲೆ ಸಹ ಒಳ್ಳೆಯ ಅಭಿಪ್ರಾಯ ಮೂಡುವುದಿಲ್ಲ.
ಸಂಪೂರ್ಣ ಖಾತೆ ವಿವರಗಳು
ಮನೆಯಲ್ಲಿರುವ ಚಿನ್ನಾಭರಣ, ಹಣ ಅಥವಾ ಬ್ಯಾಂಕ್ ಅಕೌಂಟ್ ಗಳ ಮಾಹಿತಿಯನ್ನ ನೀವು ಮಕ್ಕಳಿಗೆ ಎಂದಿಗೂ ಹಂಚಿಕೊಳ್ಳದಿರಿ. ಎಟಿಎಂ, ಪಿನ್, ಪ್ರಮುಖ ಪಾಸ್‌ವರ್ಡ್‌ಗಳನ್ನ ಮಕ್ಕಳ ಮುಂದೆ ಇಡಬೇಡಿ. ಇದು ಮಕ್ಕಳು ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಲ್ಲದೆಯೇ ಬೇರೆಯವರೊಂದಿಗೆ ಹಂಚಿಕೊಳ್ಳಲು ಕಾರಣವಾಗುತ್ತದೆ. ಇದು ನಿಮ್ಮ ಸುರಕ್ಷತೆಗೆ ರಿಸ್ಕ್ ತರಬಹುದು. ಮಗು ಹಣ, ಚಿನ್ನಾಭರಣದಿಂದ ದೂರವಿದ್ದಷ್ಟೂ ಪೋಷಕರಿಗೆ ಕ್ಷೇಮ
ಬಾಲ್ಯದ ನ್ಯೂನತೆಗಳು
ಕೆಲವೊಮ್ಮೆ ಪೋಷಕರು ತಮ್ಮ ಮಕ್ಕಳಿಗೆ ತಮ್ಮ ಬಾಲ್ಯದ ಕೆಲವು ದೌರ್ಬಲ್ಯಗಳನ್ನ ಹೇಳಿ ಬಿಡುತ್ತಾರೆ. ನೀನು ಹಾಸಿಗೆ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದೆಯಂತೆ. ಮೂಗಿನಲ್ಲಿ ಗೊಣ್ಣೆ ಸುರಿಸುತ್ತಿದ್ದಿಯಂತೆ, ಚಿಕ್ಕವನಿದ್ದಾಗ ತೊದಲುತ್ತಿದ್ದೆಯಂತೆ ಈ ರೀತಿ ಮಕ್ಕಳಿಗೆ ಇಂಥಹ ಹಳೆಯ ದೌರ್ಬಲ್ಯಗಳನ್ನ ನೆನಪಿಸಬಾರದು. ತಮಾಷೆ ಮಾಡಬಾರದು. ವಿಶೇಷವಾಗಿ ಸಂಬಂಧಿಕರು ಮತ್ತು ಹೊರಗಿನವರ ಮುಂದೆ ಬೇಡವೇ ಬೇಡ. ಇದು ಮಕ್ಕಳ ಮನಸ್ಸಿನಲ್ಲಿ ತಪ್ಪಿತಸ್ಥ ಭಾವನೆ ಮತ್ತು ಕೀಳರಿಮೆಗೆ ಕಾರಣವಾಗುತ್ತದೆ.
ಅನಾರೋಗ್ಯಕ್ಕೆ ಮಕ್ಕಳನ್ನ ಶಪಿಸಬೇಡಿ..
ಯಾವಾಗಲೂ ಕಾಳಜಿ ವಹಿಸಬೇಕಾದ ಗಂಭೀರ ಆರೋಗ್ಯ ಸಮಸ್ಯೆ ನಿಮ್ಮ ಮಗುವಿಗಿದ್ದರೆ ಅದಕ್ಕಾಗಿ ಮತ್ತೆ ಮತ್ತೆ ಹೀಯಾಳಿಸಬೇಡಿ – ನಮ್ಮ ಜೀವನಕ್ಕೆ ಹೊರೆಯಾಗಿದ್ದೀರಿ, ನಿನ್ನಿಂದ ತೊಂದರೆ ಎನ್ನುವಂತಹ ಮಾತುಗಳು ಮಗುವಿನ ಮಾನಸಿಕತೆಯ ಮೇಲೆ ಆಘಾತವುಂಟುಮಾಡುತ್ತದೆ. ಇದು ಮಗುವಿನ ಅಭಿವೃದ್ಧಿಗೂ ಹಿನ್ನಡೆಯುಂಟಾಗುತ್ತದೆ.