crime – parents sold daughter
ಇದ್ಯಾವ ನ್ಯಾಯ ಸ್ವಾಮಿ… ಒಬ್ಬ ಮಗಳ ಜೀವ ಉಳಿಸಲು ಮತ್ತೊಬ್ಬಳನ್ನ ಮಾರಿದ ಪೋಷಕರು..!
ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ತಂದೆ ತಾಯಿ ತನ್ನ ಒಬ್ಬ ಮಗಳನ್ನ ಉಳಿಸುವುದಕ್ಕಾಗಿ ಮತ್ತೊಬ್ಬ ಮಗಳನ್ನ ಕೇವಲ 10 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಅಲ್ಲದೇ ಮಾರಾಟವಾದ 12 ವರ್ಷದ ಬಾಲಕಿಯ ಬಲವಂತವಾದ ವಿವಾಹವೂ ಆಗಿದೆ ಎನ್ನಲಾಗಿದೆ.
ಅಷ್ಟಕ್ಕೂ ಆಗಿರೋದೇನು..?
ದಂಪತಿಯೊಂದು ತಮ್ಮ 16 ವರ್ಷದ ದೊಡ್ಡ ಮಗಳು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಹಿನ್ನೆಲೆ ಆಕೆಯ ಚಿಕಿತ್ಸೆಗಾಗಿ ತಮ್ಮ ಚಿಕ್ಕ ಮಗಳನ್ನು (12 ವರ್ಷದ ಬಾಲಕಿ) ಮಾರಾಟ ಮಾಡಿದ್ದಾರೆ. ಅದೂ ಕೂಡ ಕೇವಲ 10 ಸಾವಿರ ರೂಪಾಯಿಗೆ.
ಈ ದಂಪತಿಯ ಮೊದಲ ಮಗಳನ್ನ ಕೆಲ ದಿನಗಳ ಹಿಂದೆ ಮದುವೆ ಮಾಡಿಕೊಡುವಂತೆ 46 ವರ್ಷದ ಚಿನ್ನ ಸುಬ್ಬಯ್ಯ ಎಂಬಾತ ಮದುವೆ ಮಾಡಿಕೊಡುವಂತೆ ಪೀಡಿಸುತ್ತಿದ್ದ. ಈತ ತನ್ನ ಪತ್ನಿಯಿಂದ ಬೇರ್ಪಟ್ಟಿದ್ದ. ಆದರೆ ಬಾಲಕಿ ಮನೆಯವರು ಮದುವೆ ಮಾಡಿಕೊಡಲು ನಿರಾಕರಿಸಿದ್ದರು. ಆದ್ರೆ ಇತ್ತೀಚೆಗೆ ಪುತ್ರಿ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಪೋಷಕರು ಚಿಕಿತ್ಸೆಗಾಗಿ ಸುಬ್ಬಯ್ಯನಿಂದ ಹಣ ಪಡೆದು ಚಿಕ್ಕ ಮಗಳನ್ನಮಾರಾಟ ಮಾಡಿದ್ದಾರೆ. ಕೇವಲ 10 ಸಾವಿರ ರೂಪಾಯಿಗೆ ಆಕೆಯನ್ನ ಮಾರಾಟ ಮಾಡಿದ್ದಾಗಿ ಸಂಬಂಧಿಕರು ತಿಳಿಸಿದ್ದಾರೆ. ದೊಡ್ಡ ಮಗಳಿಗೆ ಚಿಕಿತ್ಸೆ ಕೊಡಿಸಿದ್ದು, ಆಕೆ ಈ ಚೇತರಿಸಿಕೊಂಡಿದ್ದಾಳೆ.
ಇತ್ತ ಸುಬ್ಬಯ್ಯ ಬಾಲಕಿಯನ್ನ ಖರೀದಿಸಿದ ನಂತರ ಆಕೆಯನ್ನ ಮದುವೆಯಾಗಿದ್ದು ಬಲವಂತವಾಗಿ ಸಂಬಂಧಿಕರ ಊರಿಗೆ ಎಳೆದೊಯ್ದಿದ್ದಾನೆ. ಆದ್ರೆ ಬಾಲಕಿ ಜೋರು ಜೋರಾಗಿ ಅಳುತ್ತಿದ್ದನ್ನ ಗಮನಿಸಿದ ನೆರೆ ಮನೆಯವರು ಈ ಬಗ್ಗೆ ಬಾಲಕಿಯನ್ನ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸುಬ್ಬಯ್ಯ ಹಾಗೂ ಬಾಲಕಿಯ ತಂದೆ ತಾಯಿಯನ್ನ ವಿಚಾರಣೆಗೊಳಪಡಿಸಿದ್ದು, ಬಾಲಕಿಯನ್ನ ಶಿಶುಪಾಲನಾ ಕೇಂದ್ರದಲ್ಲಿ ಇರಿಸಿದ್ದಾರೆ.








