ಪ್ಯಾರಿಸ್ ಒಲಿಂಪಿಕ್ಸ್ ಗೆ ಇಂದು ತೆರೆ ಬೀಳಲಿದೆ. ಜುಲೈ 26ರಿಂದ ಆರಂಭಾಗಿದ್ದ 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಗೆ ಇಂದು ತೆರೆ ಬೀಳಲಿದೆ.
17 ದಿನಗಳ ಕಾಲ ನಡೆದ ಕ್ರೀಡಾ ಮಹಾ ಸಂಗಮಕ್ಕೆ ಇಂದು ತೆರೆ ಬೀಳಲಿದ್ದು, ಭಾರತವು 6 ಪದಕಗಳಿಂದ ತನ್ನ ಅಭಿಯಾನ ಮುಗಿಸಿದಂತಾಗಿದೆ. ಜುಲೈ 26ರಂದು ಪ್ಯಾರಿಸ್ ನ (Paris) ಸೆನ್ ನದಿ ದಡದಲ್ಲಿ ಭಾರೀ ಸಂಭ್ರಮದಿಂದ ಆರಂಭವಾಗಿದ್ದ ಕ್ರೀಡಾಕೂಟಕ್ಕೆ ಸ್ಟೇಡ್ ಡೆ ಫ್ರಾನ್ಸ್ ಕ್ರೀಡಾಂಗಣದಲ್ಲಿ ತೆರೆ ಎಳೆಯಲಾಗುತ್ತದೆ. ಸಮಾರೋಪ ಸಮಾರಂಭ ಕೂಡ ಅದ್ದೂರಿಯಾಗಿ ನಡೆಯಲಿದೆ ಎಂದು ಆಯೋಜಕರು ಹೇಳಿದ್ದಾರೆ.
ಸಂಗೀತ ಪ್ರದರ್ಶನ, ಲೇಸರ್ ಲೈಟ್ ಶೋ, ವೈಮಾನಿಕ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ಸಮಾರೋಪದಲ್ಲಿ ನಡೆಯಲಿವೆ, ಭಾನುವಾರ ಮಧ್ಯಾಹ್ನ 3 ಗಂಟೆ ವೇಳೆ ಸ್ಟೇಡ್ ಡೆ ಫ್ರಾನ್ಸ್ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ಆರಂಭವಾಗಲಿದ್ದು, ಸಂಜೆ 5:15 ರವರೆಗೆ ಇರಲಿದೆ. ಸಮಾರೋಪ ಸಮಾರಂಭ ಆಗಸ್ಟ್ 11ರಂದು ಭಾನುವಾರ ನಡೆಯಲಿದೆ. ʻದಿ ಟುನೈಟ್ ಶೋʼ ನಿರೂಪಕ ಜಿಮ್ಮಿ ಫಾಲನ್ ಮತ್ತು ದೀರ್ಘಕಾಲದ ಕ್ರೀಡಾ ನಿರೂಪಕ ಮೈಕ್ ಟಿರಿಕೊ ಈ ಕಾರ್ಯಕ್ರಮದಲ್ಲಿ ಕಾಣಿಸಲಿದ್ದಾರೆ.
ಆಯಾ ದೇಶಗಳ ಧ್ವಜಗಳ ಪರೇಡ್ ನೊಂದಿಗೆ ಸಮಾರಂಭ ನಡೆಯಲಿದೆ. ಒಲಿಂಪಿಕ್ಸ್ ಹುಟ್ಟಿಕೊಂಡ ಗ್ರೀಸ್ ದೇಶದ ಹೆಗ್ಗುರುತಿಗಾಗಿ ಗ್ರೀಕ್ ಧ್ವಜ ಮೆರವಣಿಗೆ ಮುನ್ನಡೆಸಲಿದೆ. ಆತಿಥೇಯ ದೇಶ ಕೊನೆಯ ಸ್ಥಾನದಲ್ಲಿ ಸಾಗಲಿದೆ. ಭಾರತದ ಧ್ವಜಧಾರಿಗಳಾಗಿ ಪಿ.ಆರ್ ಶ್ರೀಜೇಶ್ ಮತ್ತು ಶೂಟರ್ ಮನು ಭಾಕರ್ ಕಾಣಿಸಲಿದ್ದಾರೆ.