SRH vs PBKS Match preview ಹೈದರಾಬಾದ್ vs ಪಂಜಾಬ್ | ಗೆಲುವು ಯಾರಿಗೆ..?
ಮಯಾಂಕ್ ಅಗರ್ ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಇಂದು ಕೇನ್ ವಿಲಿಯಮ್ಸನ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಮುಂಬೈ ನ ಡಾ. ಡಿ ವೈ ಪಾಟೀಲ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.
ಪಂಜಾಬ್ ಕಿಂಗ್ಸ್ ತಂಡ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿದೆ. ಅದೇ ಜೋಷ್ ನಲ್ಲಿ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ಈ ಆವೃತ್ತಿಯಲ್ಲಿ ಪಂಜಾಬ್ ಐದು ಪಂದ್ಯಗಳನ್ನು ಆಡಿದೆ. ಇದರಲ್ಲಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಪಂಜಾಬ್ ತಂಡಕ್ಕೆ ಈವರೆಗೂ ಉತ್ತಮ ಆರಂಭದ ಕೊರತೆ ಕಾಣುತ್ತಿತ್ತು. ಆದ್ರೆ ಕಳೆದ ಪಂದ್ಯದಲ್ಲಿ ಆ ಸಮಸ್ಯೆಗೆ ಪರಿಹಾರ ಸಿಕ್ಕಂತೆ ಆಗಿದೆ.
ಮಯಾಂಕ್ ಅಗರ್ ವಾಲ್ ಫಾರ್ಮ್ ಗೆ ಬಂದಿರೋದು ತಂಡಕ್ಕೆ ಬೂಸ್ಟ್ ನೀಡಿದೆ. ಇನ್ನುಳಿದಂತೆ ಶಿಖರ್ ಧವನ್, ಜಾನಿ ಬೈರ್ ಸ್ಟೋ, ಲಿಯಾಮ್ ಲಿವಿಂಗ್ ಸ್ಟೋನ್, ಶಾರೂಕ್ ಖಾನ್, ಒಡಿಯನ್ ಸ್ಮಿತ್ ತಂಡದ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ.
ಇವರಿಗೆ ಜಿತೇಶ್ ಶರ್ಮಾ ಕೂಡ ಉತ್ತಮ ಸಾಥ್ ನೀಡುತ್ತಿದ್ದಾರೆ. ಇತ್ತ ಬೌಲಿಂಗ್ ನಲ್ಲಿ ಕಗಿಸೋ ರಬಾಡ, ವೈಭವ್ ಅರೋರ ಉತ್ತಮ ಫಾರ್ಮ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಾಹುಲ್ ಚಹಾರ್, ಅರ್ಷದೀಪ್ ಸಿಂಗ್ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಬೇಕಿದೆ.
ಇತ್ತ ಕೇನ್ ವಿಲಿಯಂ ಸನ್ ಅವರ ನಾಯಕತ್ವ ಸನ್ ರೈಸರ್ಸ್ ಹೈದರಾಬಾದ್ ತಂಡ ಸತತ ಮೂರು ಗೆಲುವುಗಳೊಂದಿಗೆ ಉತ್ತಮ ಫಾರ್ಮ್ ನಲ್ಲಿದೆ. ಆರಂಭದ ಎರಡು ಸೋಲುಗಳ ಬಳಿಕ ಗೆಲುವಿನ ಟ್ರ್ಯಾಕ್ ಗೆ ಬಂದಿರುವ ಹೈದರಾಬಾದ್ ತಂಡ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಸಾಂಘಿಕ ಪ್ರದರ್ಶನ ನೀಡುತ್ತಿದೆ.
ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲುವು ಸಾಧಿಸಿದೆ. ಕೇನ್ ವಿಲಿಯಂ ಸನ್, ರಾಹುಲ್ ತ್ರಿಪಾಟಿ, ಐಡನ್ ಮಾರ್ಕ್ರಾಂ, ಟಿ ನಟರಾಜನ್ ತಂಡದ ಟ್ರಂಪ್ ಕಾರ್ಡ್ ಆಟಗಾರರಾಗಿದ್ದಾರೆ.
ಅಭಿಷೇಕ್ ಶರ್ಮಾ, ನಿಕೋಲಸ್ ಪೂರನ್ ಕೂಡ ಉತ್ತಮ ಟಚ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಶಶಾಂಕ್ ಸಿಂಗ್ ಕೂಡ ತಂಡಕ್ಕೆ ನೆರವಾಗುತ್ತಿದ್ದಾರೆ.
ಇತ್ತ ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್ ರನ್ ಗಳಿಗೆ ಕಡಿವಾಣ ಹಾಕುತ್ತಿದ್ದಾರೆ. ಜಾನ್ಸೆನ್ ವಿಕೆಟ್ ಬೇಟೆಯಾಡುತ್ತಿದ್ದಾರೆ.
ಉಮ್ರಾನ್ ಮಲಿಕ್ ತಮ್ಮ ವೇಗದ ಮೂಲಕ ಡೆತ್ ಓವರ್ ಗಳಲ್ಲಿ ಎದುರಾಳಿಗಳಿಗೆ ಭಯ ಹುಟ್ಟಿಸುತ್ತಿದ್ದಾರೆ. ಟಿ ನಟರಾಜನ್ ಪವರ್ ಪ್ಲೇ ಮತ್ತು ಡೆತ್ ಓವರ್ ಗಳಲ್ಲಿ ತಮ್ಮ ಯಾರ್ಕರ್ ಗಳ ಮೂಲಕ ಎದುರಾಳಿಗನ್ನು ಕಟ್ಟಿಹಾಕುತ್ತಿದ್ದಾರೆ.
ಒಟ್ಟಾರೆ ಪಂಬಾಜ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದಾರಾಬಾದ್ ತಂಡಗಳು ಬ್ಯಾಟಿಂಗ್ ಬೌಲಿಂಗ್ ವಿಭಾಗದಲ್ಲಿ ಸಮಬಲದೊಂದಿಗಿದೆ. ಹೀಗಾಗಿ ಇಂದಿನ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರಲಿದೆ.
pbks-vs-srh-match-preview-ipl-2022-match-28-punjab-kings-vs-sunrisers-hyderabad