ಅವರೆಕಾಳು : ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಉಪಕಾರಿ
ಮಂಗಳೂರು, ಜುಲೈ 10: ಇಂದು ಪ್ರತಿಯೊಬ್ಬರನ್ನೂ ರಕ್ತದೊತ್ತಡ( ಬ್ಲಡ್ ಪ್ರೆಶರ್) ಸಮಸ್ಯೆ ಕಾಡುತ್ತಿದೆ. ಮಕ್ಕಳು, ಯುವಕರು ಎಂದು ಭೇದ ಭಾವವಿಲ್ಲದೆ ಎಲ್ಲಾ ವಯೋವರ್ಗದವರಿಗೂ ಸಹ ಈ ಸಮಸ್ಯೆ ಇರುವುದನ್ನು ನಾವು ಕಾಣುತ್ತಿದ್ದೇವೆ.
ರಕ್ತದೊತ್ತಡ ಎಂದರೇನು?
ದೇಹದ ಎಲ್ಲಾ ಭಾಗಗಳಿಗೆ ನಮ್ಮ ಹೃದಯ ಶುದ್ಧ ರಕ್ತವನ್ನು ಪಂಪ್ ಮಾಡಿ ಕಳುಹಿಸುತ್ತದೆ ಎಂಬುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಈ ರೀತಿ ಪಂಪ್ ಮಾಡಲು ನಿಯಮಿತವಾದ ಒತ್ತಡ ಬೇಕಾಗುತ್ತದೆ. ಅದನ್ನು ರಕ್ತದೊತ್ತಡ ಎಂದು ಕರೆಯುತ್ತೇವೆ.
ಆ ಒತ್ತಡ ಜಾಸ್ತಿಯಾದರೆ ಅದನ್ನು ಅಧಿಕ ರಕ್ತದೊತ್ತಡವೆಂದೂ ಮತ್ತು ಕಡಿಮೆಯಾದರೆ ಕಡಿಮೆ ರಕ್ತದೊತ್ತಡವೆಂದೂ ಕರೆಯುತ್ತಾರೆ. ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದದ್ದು ಅವಶ್ಯಕ.
ಅವರೆಕಾಳು ಬ್ಲಡ್ ಪ್ರೆಶರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಬಹಳಷ್ಟು ಸಹಾಯಕಾರಿ. ಅವರೆಕಾಳಿನಲ್ಲಿ ಮ್ಯಾಗ್ನೇಶಿಯಂ, ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂ ಅಂಶಗಳಿದ್ದು, ಇವು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.ಅಷ್ಟೇ ಅಲ್ಲ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಉತ್ತಮವಾಗಿದ್ದು, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಅವರೆಕಾಳಿನಿಂದ ಆರೋಗ್ಯಕ್ಕೆ ಬಹಳಷ್ಟು ಉಪಯೋಗವಿದೆ. ಅವರೆಕಾಳಿನಲ್ಲಿರುವ ವಿಟಮಿನ್ ಮತ್ತು ಫೈಬರ್ ಅಂಶವು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಮಾಂಸಾಹಾರ ಸೇವನೆಯಿಂದ ಸಿಗುವ ಪ್ರೊಟೀನ್ ಅಂಶವು ಅವರೆಕಾಳಿನ ಸೇವನೆಯಿಂದ ಸಿಗುತ್ತದೆ.
ಅವರೆಕಾಳಿನಲ್ಲಿ ಫೈಬರ್ ಅಂಶ ಬಹಳ ಇರುವುದರಿಂದ ಇದು ಟೈಪ್ 2 ಮಧುಮೇಹ ರೋಗಿಗಳಿಗೂ ಉತ್ತಮ ಆಹಾರ. ಫೈಬರ್ ಅಂಶ ಕ್ರಿಯೆಯನ್ನು ನಿಧಾನಿಸುವ ಹಿನ್ನಲೆಯಲ್ಲಿ ಆಹಾರ ಸೇವನೆಯ ನಂತರ ಸಕ್ಕರೆ ಪ್ರಮಾಣ ರಕ್ತದಲ್ಲಿ ಕೂಡಲೇ ಹೆಚ್ಚುವುದನ್ನು ನಿಯಂತ್ರಿಸುತ್ತದೆ.
ಅವರೇಕಾಳಿನಲ್ಲಿ ಕ್ಯಾಲರಿ ಪ್ರಮಾಣ ಕಡಿಮೆ ಇದ್ದು ಪ್ರೊಟೀನ್ ಪ್ರಮಾಣ ಹೆಚ್ಚಿಗೆ ಇರುವುದರಿಂದ ಇದನ್ನು ಪೌಷ್ಠಿಕಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಉಳ್ಳ ಉತ್ತಮ ಡಯೆಟ್ ಫುಡ್ ಎಂದು ಕರೆಯಬಹುದು.