ಪೆಗಾಸಸ್ ವಿಚಾರ | ಅಧಿಕಾರಕ್ಕಾಗಿ ಕೀಳು ಮಟ್ಟಕ್ಕಿಳಿಯುತ್ತಿದೆ ಬಿಜೆಪಿ
ಬೆಂಗಳೂರು : ದೇಶದಾದ್ಯಂತ ಪೆಗಾಸಸ್ ಪದ ಭಾರಿ ಸದ್ದು ಮಾಡುತ್ತಿದೆ. ರಾಜ್ಯದಲ್ಲೂ ಈ ಬಗ್ಗೆ ಚರ್ಚೆ ಶುರುವಾಗಿದೆ. ಈ ಮಧ್ಯೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಪೆಗಾಸಸ್ ಬೇಹುಗಾರಿಕೆ ವಿಚಾರ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಅವರು, ಪೆಗಾಸಸ್ ಬೇಹುಗಾರಿಕೆ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಸಿಲುಕಿಕೊಂಡಿದೆ. ಇದು ಮಾನವ ಹಕ್ಕು ಉಲ್ಲಂಘನೆಯಂತಹ ಪ್ರಕರಣವಾದರೂ ಇತ್ತೀಚೆಗೆ ಕೇಂದ್ರ ಆದ್ಯತೆ ಮೇಲೆ ಗೂಢಚರ್ಯೆ ನಡೆಸುತ್ತಿರುವುದು ಹೊಸದೇನಲ್ಲ. ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು, ರಾಜ್ಯಗಳಲ್ಲಿ ಸರ್ಕಾರ ಕೆಡವಿ, ಸರ್ಕಾರವನ್ನು ತರಲು ಬಿಜೆಪಿ ಪ್ರಯೋಗಿಸಿರುವ ಅಸ್ತ್ರಗಳಲ್ಲಿ ಇದೂ ಒಂದು ಎಂದು ಆರೋಪಿಸಿದ್ದಾರೆ.
ನನ್ನ ಮೇಲೆ ಗೂಢಚರ್ಯೆ ನಡೆಸಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಕೊನೆಗೆ ನನ್ನ ವಿರುದ್ಧವೇ ಫೋನ್ ಕದ್ದಾಲಿಕೆ ಆರೋಪ ಮಾಡಿತು. ಸಿಬಿಐ ತನಿಖೆ ನಡೆಸಿತು. ಅದಾಗಲೇ ಅಪಮಾರ್ಗದಲ್ಲಿ ಹೆಜ್ಜೆ ಹಾಕಿದ್ದ ಬಿಜೆಪಿ, ನನ್ನ ಮೇಲಿನ ತನಿಖೆ ಮೂಲಕ ಆತ್ಮವಂಚನೆಯಿಂದ ನಡೆದುಕೊಂಡಿದೆ. ಅಧಿಕಾರಕ್ಕಾಗಿ ಬಿಜೆಪಿ ಕೀಳು ಮಟ್ಟಕ್ಕಿಳಿಯುತ್ತಿದೆ. ಇದು ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
`ಬಿಎಸ್ ವೈ ಮೌನ’ದ ಹಿಂದೆ `ಮಹಾ ಮಾಸ್ಟರ್ ಪ್ಲಾನ್’..!
ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಹೋರಾಟಗಾರರ ಮೇಲೆ ಗೂಢಚರ್ಯೆ ನಡೆಸಿರುವ ಬಿಜೆಪಿ ಮುಂದೊಂದು ದಿನ ಅಗತ್ಯಬಿದ್ದಾಗ ಜನರ ವೈಯಕ್ತಿಕ ಬದುಕಿನಲ್ಲಿ ಇಣುಕುವುದಿಲ್ಲ ಎಂಬುದಕ್ಕೆ ಖಚಿತತೆ ಇದೆಯೇ? ಅಂತಹ ದಿನವೂ ದೂರವಿಲ್ಲ. ಬಿಜೆಪಿ ದಮನಕಾರಿ ನಡೆ ಈಗ ಮಾನವ ಹಕ್ಕುಗಳತ್ತ ಕೇಂದ್ರೀಕೃತವಾಗಿದೆ. ಬಿಜೆಪಿಯ ಇಂಥ ಕೃತ್ಯಗಳ ಬಗ್ಗೆ ಜನರು ಜಾಗೃತರಾಗಬೇಕು” ಎಂದು ಮನವಿ ಮಾಡಿಕೊಂಡಿದ್ದಾರೆ.