ಚಾಮರಾಜನಗರ: ರಾಜ್ಯದ ಜನರು 136 ಸೀಟುಗಳನ್ನು ಕೊಟ್ಟಿದ್ದು, ಸಿದ್ದರಾಮಯ್ಯ (Siddaramaiah) ಸಿಎಂ ಆಗಿ ಜನ ಸೇವೆ ಮಾಡಲೆಂಬ ಕಾರಣಕ್ಕೆ ಹೊರತು, ವಿಜಯೇಂದ್ರ ಕೇಳುತ್ತಿದ್ದಂತೆ ರಾಜೀನಾಮೆ ನೀಡಲು ಅಲ್ಲ ಎಂದು ಸಚಿವ ಹೆಚ್.ಸಿ.ಮಹದೇವಪ್ಪ (H.C.Mahadevappa) ತಿರುಗೇಟು ನೀಡಿದ್ದಾರೆ.
ಚಾಮರಾಜನಗರದಲ್ಲಿ (Chamarajanagara) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ, ಯಡಿಯೂರಪ್ಪ, ಅಶೋಕ್, ಹೆಚ್ಡಿಕೆ, ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ ಇವರೆಲ್ಲಾ ಏನೇನ್ ಮಾಡಿದ್ದಾರೆ ಗೊತ್ತಾ? ಅವರ ಮೇಲೆ ಸಾಕಷ್ಟು ಪ್ರಕರಣಗಳಿವೆ. ಮೊದಲು ಅವರ ಮನೆ ಶುದ್ಧಿ ಮಾಡಿಕೊಳ್ಳಲಿ. ಸಿಎಂ ಸಿದ್ದರಾಮಯ್ಯ ತಪ್ಪೇ ಮಾಡಿಲ್ಲ. ಶಾಸಕರು, ಮಂತ್ರಿಗಳು, ಹೈಕಮಾಂಡ್ ಎಲ್ಲಾ ಅವರ ಜೊತೆ ಇದ್ದಾರೆ ಎಂದು ಹೇಳಿದ್ದಾರೆ.
ಮುಡಾ ಹಗರಣದಲ್ಲಿ ವೈಟ್ನರ್ ಬಳಸಿ ತಿದ್ದಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಪಾತ್ರ ಇಲ್ಲದಿದ್ದರೂ ವಿಪಕ್ಷದವರು ರಾಜಕೀಯಕರಣಗೊಳಿಸುತ್ತಿದ್ದಾರೆ. ರಾಜ್ಯದಲ್ಲಿ ಅತಿವೃಷ್ಟಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಆದರೆ ವಿಪಕ್ಷದವರು ಆ ಕಡೆ ಗಮನಹರಿಸದೇ ವೃತ ಕಾಲಹರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಿಎಂ ಸಾರ್ವಜನಿಕ ಜೀವನಕ್ಕೆ ಕಪ್ಪುಚುಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಕೋಮುವಾದಿಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಆಗಬಾರದು ಎಂಬುವುದು ಅವರ ಆಸೆ ಜೆಡಿಎಸ್, ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಎಲ್ಲಾ ಸೇರಿ ರಾಜಕೀಯ ಪಿತೂರಿ ಎಂದು ಹೇಳಿದ್ದಾರೆ.








