ಜನ ಬದಲಾವಣೆ ಬಯಸಿ ಕಾಂಗ್ರೆಸ್ ಗೆ ಮತ ನೀಡಿದ್ದಾರೆ : ಡಿ.ಕೆ.ಶಿವಕುಮಾರ್ DK Shivakumar saaksha tv
ಬೆಂಗಳೂರು : ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಜಿಲ್ಲೆಯ ಜನರೇ ಬದಲಾವಣೆ ಬಯಸಿ ಕಾಂಗ್ರೆಸ್ ಗೆ ಮತ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿನ ಗೆಲವು ಕೇವಲ ಕಾಂಗ್ರೆಸ್ ಪಕ್ಷದ್ದಲ್ಲ. ಇಡೀ ರಾಜ್ಯದ ಜನರ ಗೆಲವು. ಜನ ಬಿಜೆಪಿ ಆಡಳಿತ ನೋಡಿದ್ದು, ಬದಲಾವಣೆ ಬಯಸಿದ್ದಾರೆ.
ರಾಜ್ಯ ಕಾಂಗ್ರಸ್ ಕಾರ್ಯಕರ್ತರು ಅತ್ಯುತ್ತಮ ಕೆಲಸ ಮಾಡಿದ್ದು, ಮತದಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, ರಾಜ್ಯದಲ್ಲಿ ಬದಲಾವಣೆ ಗಾಳಿ ಆರಂಭವಾಗಿದೆ.
ಉತ್ತಮ ಆಡಳಿತ ನೀಡುವ ಸರ್ಕಾರ ಬರಬೇಕು. ಬಿಜೆಪಿ ಯಾವ ಕಾರಣಕ್ಕೆ ನಾಯಕತ್ವ ಬದಲಾವಣೆ ಮಾಡುತ್ತಿದೆ, ಅವರು ಎಷ್ಟು ಜನ ಮುಖ್ಯಮಂತ್ರಿ ಮಾಡುತ್ತಾರೆ ಎಂಬುದರ ಬಗ್ಗೆ ನಾವು ಚರ್ಚೆ ಮಾಡುವುದಿಲ್ಲ. ಅದು ಅವರಿಗೆ ಬಿಟ್ಟ ವಿಚಾರ. ಆದರೆ ಜನ ಬಿಜೆಪಿ ಸರ್ಕಾರ ಕಿತ್ತೊಗೆದು ಪರ್ಯಾಯ ಸರ್ಕಾರವನ್ನು ಬಯಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
2023ರ ಚುನಾವಣೆಗೆ ಇದು ಮುನ್ಸೂಚನೆಯೇ ಎಂಬ ಪ್ರಶ್ನೆಗೆ, ‘ಇದು ಕೇವಲ ನಗರ ಸ್ಥಳೀಯ ಸಂಸ್ಥೆಗಳ ವಿಚಾರ ಮಾತ್ರವಲ್ಲ. ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಜಿಲ್ಲೆಯ ಜನರೇ ಬದಲಾವಣೆ ಬಯಸಿ ಕಾಂಗ್ರೆಸ್ ಗೆ ಮತ ನೀಡಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಚುನಾಯಿತ ಪ್ರತಿನಿಧಿಗಳು ಕೂಡ ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ. ಬಿಜೆಪಿ ಸರ್ಕಾರ ತಮಗೆ ಸಿಕ್ಕ ಅವಕಾಶದಲ್ಲಿ ವಿಫಲರಾಗಿದ್ದು, ಜನ ಕಾಂಗ್ರೆಸ್ ಸರ್ಕಾರವನ್ನು ಬಯಸುತ್ತಿದ್ದಾರೆ’ ಎಂದರು.