ತುಮಕೂರು: ಬೈಕ್ ವೀಲ್ಹಿಂಗ್ ಮಾಡದಂತೆ ಪೊಲೀಸ್ ಇಲಾಖೆ ಎಷ್ಟೇ ಎಚ್ಚರಿಕೆ ನೀಡಿದರೂ ಹಲವು ಪುಂಡರು ಮಾತ್ರ ವ್ಹೀಲಿಂಗ್ ಮಾಡಿ ಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಬೈಕ್ ಗಳನ್ನು ಫ್ಲೈ ಓವರ್ ನಿಂದ ಕೆಳಗೆ ಎಸೆದಿರುವ ಘಟನೆ ನಡೆದಿದೆ.
ಈ ಘಟನೆ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬೈಕ್ ನ್ನು ಫ್ಲೈ ಓವರ್ ನಿಂದ ಎಸೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಬೆಂಗಳೂರಿಂದ ತುಮಕೂರು ಕಡೆಗೆ ಎರಡು ದ್ವಿಚಕ್ರ ವಾಹನಗಳಲ್ಲಿ ಚಲಿಸುತ್ತಿದ್ದ ಪುಂಡರು ವೀಲ್ಹಿಂಗ್ ಮಾಡುತ್ತಿದ್ದರು. ಆಗ ಪ್ರಯಾಣಿಕರು ಇದನ್ನು ಪ್ರಶ್ನಿಸಿದ್ದಾರೆ. ಆದರೂ ಪುಂಡರು ಮಾತ್ರ ತಮ್ಮ ವ್ಹೀಲಿಂಗ್ ನಿಲ್ಲಿಸಿಲ್ಲ.
ಹೀಗಾಗಿ ಇದರಿಂದ ಕೋಪಗೊಂಡ ಸಾರ್ವಜನಿಕರು ಚಕ್ರ ವಾಹನವನ್ನು ಹೆದ್ದಾರಿಯ ಮೇಲ್ಸೇತುವೆಯಿಂದ ಕೆಳಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ನೆಲಮಂಗಲ ಸಂಚಾರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬೈಕ್ ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.








