ಬೆಂಗಳೂರು : ಲಾಕ್ ಡೌನ್ ಹಿನ್ನೆಲೆ ಮದ್ಯ ಮಾರಾಟವಿಲ್ಲದ ಕಾರಣ ಹಲವಷ್ಟು ಕುಟುಂಬಗಳು ಸಂತೋಷದಿಂದಿದೆ. ಹಾಗಾಗಿ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಹೆಚ್.ಕೆ.ಪಾಟೀಲ್ ಮನವಿ ಮಾಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸುದೀರ್ಘ ಪತ್ರ ಬರೆದಿರುವ ಹೆಚ್.ಕೆ ಪಾಟೀಲ್ ಅವರು, ಸದ್ಯ ಮದ್ಯ ನಿಷೇಧ ಆಗಿರುವ ಕಾರಣ ಕುಟುಂಬಗಳಲ್ಲಿ ಶಾಂತಿ ನೆಲೆಸಿದೆ. ಮಕ್ಕಳು ಒಳ್ಳೆಯ ಸಂಸ್ಕಾರ ಪಡೆಯಲು ಅನುಕೂಲವಾಗಿದೆ. ಮಹಿಳೆಯರ ಶೋಷಣೆ ತಪ್ಪಿದೆ. ನಿತ್ಯ ಕಣ್ಣೀರಿನಲ್ಲಿ ನರಕಯಾತನೆಯಲ್ಲು ಮಲಗುತ್ತಿದ್ದ ನಮ್ಮ ಸೋದರಿಯರು ಈಗ ನೆಮ್ಮದಿಯಲ್ಲಿ ರಾತ್ರಿ ಕಳೆಯತ್ತಿದ್ದಾರೆ. ಜನತೆಯ ಶಾಂತಿ ನೆಮ್ಮದಿ ಹಣಕೊಟ್ಟರೆ ಬರುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಇದು ಸೂಕ್ತ ಸಮಯ ಎಂದಿದ್ದಾರೆ.
ರಾಜ್ಯದ ಬೊಕ್ಕಸಕ್ಕೆ ಆದಾಯ ತರುವ ಒಂದು ಮೂಲ ಇಲ್ಲದಂತೆ ಮಾಡುವುದು ತಪ್ಪು ಎನ್ನುವರು ಇದ್ದಾರೆ. ಆದರೆ ನಿಷೇಧ ಮಾಡಿದರೆ ಅದು ಶ್ರೇಷ್ಠ ಕೆಲಸ. ಮುಖ್ಯಮಂತ್ರಿಗಳು ಅಂತಹ ಹೆಜ್ಜೆ ಇಡಬೇಕೆಂದು ಆಶಿಸುತ್ತೇನೆ ಎಂದು ಹೆಚ್.ಕೆ ಪಾಟೀಲ್ ಮನವಿ ಮಾಡಿದ್ದಾರೆ.