ರೈಲು ಬರುತ್ತಿದ್ದರು ಹಳಿಯ ಮೇಲೆ ನಿಂತು ಕಾಲು ಕಳೆದುಕೊಂಡ ಭೂಪ
ಹುಬ್ಬಳ್ಳಿ: ರೈಲು ಬರುತ್ತಿದ್ದರು ಹಳಿಯ ಮೇಲೆ ನಿಂತು ರೈಲಿನಡಿ ಸಿಲುಕಿ ವ್ಯಕ್ತಿಯೋರ್ವ ಎರಡು ಕಾಲುಗಳನ್ನು ಕಳೆದುಕೊಂಡಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್ ಹಿಂಭಾಗ ಪ್ರವೇಶ ದ್ವಾರದ ರೈಲ್ವೆ ಮಾರ್ಗದಲ್ಲಿ ನಡೆದಿದೆ.
ಹೆಗ್ಗೇರಿ ನಿವಾಸಿಯೋರ್ವ ಶಾಲಿಮಾರ್-ವಾಸ್ಕೋಡಿಗಾಮಾ ರೈಲಿಗೆ ಸಿಲುಕಿ ಕಾಲುಗಳನ್ನು ಕಳೆದುಕೊಂಡಿದ್ದಾನೆ. ರೈಲು ಹುಬ್ಬಳ್ಳಿ ನಿಲ್ದಾಣದಿಂದ ಹೊರಟ ನಾಲ್ಕೈದು ನಿಮಿಷದಲ್ಲೇ ಈ ಘಟನೆ ನಡೆದಿದೆ.
ರೈಲು ಚಲಿಸುತ್ತಿದ್ದ ವೇಳೆ ಹಳಿ ಮೇಲೆ ವ್ಯಕ್ತಿ ನಿಂತಿರುವುದನ್ನು ಗಮನಿಸಿದ ಲೋಕೋ ಪೈಲಟ್ ಹಾರ್ನ್ ಮಾಡಿದ್ದಾರೆ. ಆದರೆ ವ್ಯಕ್ತಿ ಹಳಿಯ ಮೇಲಿಂದ ಆಚೆ ಸರಿಯದೇ ಅಲ್ಲೇ ನಿಂತಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ರೈಲ್ವೆ ಸಿಬ್ಬಂದಿ ಚಲಿಸುತ್ತಿದ್ದ ರೈಲನ್ನು ನಿಲ್ಲಿಸಿದ್ದಾರೆ ಎನ್ನಲಾಗ್ತಿದೆ.
ಆದರೂ ರೈಲು ನಿಯಂತ್ರಣಕ್ಕೆ ಬಾರದೆ ಎಂಜಿನ್ ಹಾಗೂ ಮೂರ್ನಾಲ್ಕು ಬೋಗಿಗಳು ವ್ಯಕ್ತಿಯ ಮೇಲೆ ಹರಿದ ಕಾರಣ ಒಂದು ಕಾಲು ಸಂಪೂರ್ಣ ತುಂಡಾಗಿದ್ದು, ಇನ್ನೊಂದು ಕಾಲು ಅರ್ಧ ತುಂಡಾಗಿ ತೀವ್ರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಸಾವು-ಬದುಕಿನ ನಡುವೆ ವ್ಯಕ್ತಿ ಹೋರಾಡುತ್ತಿದ್ದಾನೆ.
ಈ ಸಂಬಂಧ ಹುಬ್ಬಳ್ಳಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.