ಬೆಂಗಳೂರು: ಮೂರ್ನಾಲ್ಕು ದಿನಗಳಲ್ಲಿ ಕೊರೊನಾಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಲಿದ್ದು, ಲಸಿಕೆ ಆಂದೋಲನ ಯಶಸ್ವಿಯಾಗಿ ನಡೆಸುವ ಸಲುವಾಗಿ ಆರೋಗ್ಯ ಇಲಾಖೆ ಇಂದು ಎಲ್ಲಾ ಜಿಲ್ಲೆಗಳಲ್ಲಿ 2ನೇ ಹಂತದ ಡ್ರೈ ರನ್ (ಲಸಿಕೆ ತಾಲೀಮು) ನಡೆಸಿತು.
ಬೆಂಗಳೂರು ನಗರ ಸೇರಿದಂತೆ ರಾಜ್ಯದ 24 ಜಿಲ್ಲಾಸ್ಪತ್ರೆ, 20 ಮೆಡಿಕಲ್ ಕಾಲೇಜು, 43 ತಾಲೂಕು ಆಸ್ಪತ್ರೆ, 31 ಸಮುದಾಯ ಆರೋಗ್ಯ ಕೇಂದ್ರ, 87 ಪ್ರಾಥಮಿಕ ಆರೋಗ್ಯ ಕೇಂದ್ರ, 30 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 28 ಖಾಸಗಿ ಆರೋಗ್ಯ ಕೇಂದ್ರ ಸೇರಿಕೊಂಡು 263 ಪ್ರದೇಶಗಳಲ್ಲಿ ಲಸಿಕೆ ಡ್ರೈ ರನ್ ನಡೆಸಲಾಯಿತು.

ಬೆಂಗಳೂರಿನ ಆಸ್ಟರ್ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಸುಧಾಕರ್, ಡ್ರೈರನ್ ಪ್ರಾತ್ಯಕ್ಷಿಕೆಯನ್ನು ಖುದ್ದು ಪರಿಶೀಲನೆ ನಡೆಸಿದರೆ, ಉನ್ನತ ಶಿಕ್ಷಣ ಸಚಿವ ಹಾಗೂ ಡಿಸಿಎಂ ಡಾ.ಅಶ್ವತ್ಥ ನಾರಾಯಣ, ರಾಮನಗರದಲ್ಲಿ ನಡೆದ ಡ್ರೈರನ್ ಅಣಕು ತಾಲೀಮಿಗೆ ಚಾಲನೆ ನೀಡಿ ಖುದ್ದು ತಾವೇ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಪ್ರತ್ಯಕ್ಷ ಸಾಕ್ಷಿಯಾದರು.
ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಲಸಿಕೆ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿದ ಬಳಿಕ ಲಸಿಕೆ ಪಡೆದ ನಂತರ 30 ನಿಮಿಷ ನಿಗಾಕ್ಕೆ ಒಳಗಾಗುವ ವ್ಯವಸ್ಥೆಯನ್ನೂ ಖುದ್ದು ವೀಕ್ಷಿಸಿದರು.
ಪ್ರತಿಯೊಬ್ಬರಿಗೂ ಸಿಗುತ್ತೆ ಲಸಿಕೆ
ಕೊರೊನಾ ಲಸಿಕೆ ಪ್ರಕ್ರಿಯೆಯನ್ನು ಜನಾಂದೋಲನ ರೀತಿಯಲ್ಲಿ ನಡೆಸಲು ಸರ್ಕಾರ ಸಿದ್ದತೆ ಮಾಡಿಕೊಂಡಿದ್ದು, ಎಲ್ಲರಿಗೂ ಲಸಿಕೆ ಸಿಗಲಿದೆ. ಮೊದಲ ಡೋಸ್ ಕೊಟ್ಟ 28 ದಿನಗಳ ನಂತರ 2ನೇ ಡೋಸ್ ನೀಡಲಾಗುವುದು. 2ನೇ ಹಂತದಲ್ಲಿ ಶೇ.8ರಿಂದ 10ರಷ್ಟು ಜನರಿಗೆ , 3ನೇ ಹಂತದಲ್ಲಿ ಶೇ.20ರಷ್ಟು ಜನರಿಗೆ ಲಸಿಕೆ ನೀಡಲಾಗುವುದು ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದರು.

ಯಾದಗಿರಿಯಲ್ಲೂ ಲಸಿಕೆ ತಾಲೀಮು
ಕೊವೀಡ್ ಲಸಿಕೆ ಡ್ರೈರನ್ ಯಾದಗಿರಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ನಡೆಸಲಾಯಿತು.
ಯಾದಗಿರಿ ಜಿಲ್ಲೆಯಲ್ಲಿ 6 ಕಡೆ ಡ್ರೈರನ್ ಕೇಂದ್ರಗಳು ಆರಂಭಿಸಲಾಗಿತ್ತು. ಮುದ್ನಾಳ ನೂತನ ಜಿಲ್ಲಾಸ್ಪತ್ರೆ, ನಗರದ ವಿಬಿಆರ್ ಖಾಸಗಿ ಆಸ್ಪತ್ರೆ ಸೇರಿ 6 ಕೇಂದ್ರಗಳಲ್ಲಿ 6 ತಂಡ ರಚಿಸಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿ 30 ಜನರ ನಿಯೋಜನೆ ಮಾಡಲಾಗಿತ್ತು. 1 ಕೇಂದ್ರದಲ್ಲಿ 25 ಕೊರೊನಾ ವಾರಿಯರ್ಸ್ ಗಳಿಗೆ ಡ್ರೈರನ್ ತಾಲೀಮು ಮಾಡಲಾಯಿತು.
ಬೀದರ್ ನಲ್ಲಿ ಕೋರೊನಾ ಲಸಿಕೆ ಡ್ರೈರನ್
ಗಡಿ ಜಿಲ್ಲೆ ಬೀದರ್ ನಲ್ಲಿ ಆರು ಕಡೆ ಕೊರೊನಾ ಲಸಿಕೆ ಡ್ರೈರನ್ ನಡೆಸಲಾಯಿತು. ಬೀದರ್ ಜಿಲ್ಲಾಸ್ಪತ್ರೆ ಬ್ರಿಮ್ಸ್ ಮೆಡಿಕಲ್ ಕಾಲೇಜು, ನಗರದ ಓಲ್ಡ್ ಸಿಟಿಯ ನೂರು ಹಾಸಿಗೆ ಹೆರಿಗೆ ಆಸ್ಪತ್ರೆ, ಸಾರ್ವಜನಿಕ ತಾಲೂಕು ಆಸ್ಪತ್ರೆ ಔರಾದ್, ಸಮುದಾಯದ ಆರೋಗ್ಯ ಕೇಂದ್ರ ಸಂತಪೂರ್, ಪ್ರಾಥಮಿಕ ಆರೋಗ್ಯ ಕೇಂದ್ರ ಅಣದೂರ್, ಪ್ರಾಥಮಿಕ ಆರೋಗ್ಯ ಕೇಂದ್ರ ನೌಬಾದ್ ನಲ್ಲಿ ಡ್ರೈ ರನ್ ನಡೆಯಿತು.
ಒಟ್ಟಾರೆ ರಾಜ್ಯಾದ್ಯಂತ ಲಸಿಕೆಯ ತಾಲೀಮು ನಡೆದಿದ್ದು, ಸೋಮವಾರ ವಾರಿಯರ್ಸ್ಗಳಿಗೆ ಲಸಿಕೆ ವಿತರಣೆ ನಡೆಯುವ ಸಾಧ್ಯತೆ ಇದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








