ಮಂಗಳೂರು: ಮಳೆ ನೀರಿನ ಒಳಚರಂಡಿ ಕಟ್ಟಕೊಂಡ ಪರಿಣಾಮ ಸ್ವತಃ ಮಂಗಳೂರಿನ ಬಿಜೆಪಿ ಕಾರ್ಪೋರೇಟರ್ ಮ್ಯಾನ್‌ಹೋಲ್‌ಗೆ ಇಳಿದು ಸ್ವಚ್ಛಗೊಳಿಸಿದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮಂಗಳೂರಿನ ಕದ್ರಿ ಕಂಬಳ ವಾಡ್‌ನ ಬಿಜೆಪಿ ಕಾರ್ಪೋರೇಟರ್ ಮನೋಹರ ಶೆಟ್ಟಿ ಮ್ಯಾನ್‌ಹೋಲ್‌ಗೆ ಇಳಿದು ಸ್ವಚ್ಛ ಮಾಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿರುವುದರಿAದ ಮಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ಕದ್ರಿ ಕಂಬಳ ರಸ್ತೆಯಲ್ಲಿನ ಚರಂಡಿಯಲ್ಲಿ ಮಳೆ ನೀರಿನ ಹರಿವಿನ ಸಮಸ್ಯೆಯಾಗಿ ತಡೆಯುಂಟಾದಾಗಿತ್ತು. ಹೀಗಾಗಿ ಚರಂಡಿ ನೀರು ರಸ್ತೆಯ ಮೇಲೆಯೇ ಹರಿದು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿತ್ತು.
ವಿಷಯ ತಿಳಿದು ಸ್ಥಳಕ್ಕೆ ಬಂದ ಕಾರ್ಪೋರೇಟರ್ ಮನೋಹರ್ ಶೆಟ್ಟಿ, ಮ್ಯಾನ್‌ಹೋಲ್‌ಗೆ ಇಳಿದು ಸಮಸ್ಯೆ ಬಗೆಹರಿಸಲು ಪೌರ ಕಾರ್ಮಿಕರನ್ನು ಕೇಳಿದ್ದಾರೆ. ಆದರೆ, ಅವರು ಒಪ್ಪದೆ ಇದ್ದಾಗ ಸ್ವತಃ ಮನೋಹರ್ ಶೆಟ್ಟಿಯವರು ಚೇಂಬರ್ ಒಳಗಡೆ ಇಳಿದು ಸಮಸ್ಯೆ ಏನೆಂದು ತಿಳಿದು ಕಾರ್ಮಿಕರಿಗೆ ವಿವರಿಸಿದ್ದಾರೆ.
ಇಷ್ಟಾದ ಮೇಲೂ ತೊಡಕನ್ನು ಸರಿಪಡಿಸಲು ಕಾರ್ಮಿಕರು ಚೇಂಬರ್ ಒಳಗಡೆ ಇಳಿಯದಿದ್ದಾಗ ಕೂಡಲೇ ಕಾರ್ಪೊರೇಟರ್ ಮನೆಯಿಂದ ಒಂದು ಜೊತೆ ಬದಲಿ ಬಟ್ಟೆಯನ್ನು ತರಿಸಿ ಧರಿಸಿ ಚೇಂಬರ್ ಒಳಗಡೆ ಇಳಿದು ತಾನೇ ಸ್ವತಃ ಕೆಲಸ ಮಾಡಿ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೋಹರ ಶೆಟ್ಟಿ ಅವರ ಜನಪರ ಕಾಳಜಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮನೋಹರಶೆಟ್ಟಿ, ನಾನೂ ಒಬ್ಬ ಸಾಮಾನ್ಯ ಮನುಷ್ಯ, ದೇವರು ಅಲ್ಲ. ನನ್ನ ವಾರ್ಡಿನ ಜನಸಾಮಾನ್ಯರು ಕಷ್ಟಪಡುತ್ತಿರುವಾಗ ಸ್ಪಂದಿಸಬೇಕಾದದ್ದು ನನ್ನ ಕರ್ತವ್ಯ. ಹೀಗಾಗಿ ನನ್ನಿಂದಾದ ಸಣ್ಣ ಕೆಲಸ ಮಾಡಿದ್ದೇನೆ ಅಷ್ಟೇ ಎಂದಿದ್ದಾರೆ.
ಮ್ಯಾನ್‌ಹೋಲ್‌ನ ಇಳಿಯುವಂತೆ ಬಡ ಕಾರ್ಮಿಕರನ್ನು ಇಳಿಸುತ್ತೇವೆ. ಒಂದು ವೇಳೆ ಅವರ ಜೀವಕ್ಕೆ ಅಪಾಯವಾದರೆ ಯಾರು ಹೊಣೆಯಾಗುತ್ತಾರೆ. ಹೀಗಾಗಿ ಬಡ ಕಾರ್ಮಿಕರ ಮೇಲೆ ಒತ್ತಡ ಹೇರಬಾರದು ಎಂಬ ಕಾರಣಕ್ಕೆ ನಾನೇ ಮೋರಿಯೊಳಗೆ ಇಳಿದು ಸ್ವಚ್ಛ ಮಾಡಿದೆ ಎಂದು ಮನೋಹರ ಶೆಟ್ಟಿ ಸ್ಪಷ್ಟಪಡಿದ್ದಾರೆ.