ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಫೇಲ್ ವಿಚಾರವಾಗಿ ಕೇಂದ್ರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸುತ್ತಾ ಕೇಂದ್ರದಿಂದ ಹಗರಣದ ಆರೋಪ ಮಾಡುತ್ತಲೇ ಬಂದಿದ್ದರು. ಆದ್ರೆ ಈ ವಿಚಾರದಲ್ಲಿ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಆದರೂ ಸಹ ರಾಗಾ ಮಾತ್ರ ತಮ್ಮ ವಾದಕ್ಕೆ ಕಟಿಬದ್ಧರಾಗಿದ್ದರು. ಆದರೆ ಈ ವಿಚಾರವನ್ನು ಕೆಲ ದಿನಗಳ ಕಾಲ ಬದಿಗಿಟ್ಟಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಮತ್ತೆ ರಫೇಲ್ ವಿಚಾರವಾಗಿ ಕೇಂದ್ರದ ವಿರುದ್ಧ ಗುಡುಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ್ದ ರಾಗಾ ಮಹಾತ್ಮಾ ಗಾಂಧೀಜಿ ಅವರ ‘ ಸತ್ಯ ಒಂದು, ಮಾರ್ಗಗಳು ಬೇರೆ ಬೇರೆ’ಎಂಬ ಉಕ್ತಿಯನ್ನು ಹಾಕಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪಿಯೂಷ್ ಗೊಯೆಲ್ ಅವರು, ಇದೇ ರಫೇಲ್ ವಿಚಾರವನ್ನಿಟ್ಟುಕೊಂಡು 2024ರ ಚುನಾವಣೆ ಎದುರಿಸುವಂತೆ ರಾಹುಲ್ ಗಾಂಧಿ ಅವರಿಗೆ ಸವಾಲ್ ಹಾಕಿದ್ದಾರೆ.
ಯುದ್ಧೋಪಕರಣಗಳ ಖರೀದಿ ಕುರಿತ ವಿದೇಶಿ ಕಂಪನಿಗಳ ಜೊತೆಗಿನ ಒಪ್ಪಂದಗಳಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯದಿಂದ ಸಿಎಜಿಗೆ ವರದಿ ಸಲ್ಲಿಸಲಾಗಿದೆ. ಅದರಲ್ಲಿ ರಫೇಲ್ ಯುದ್ಧ ವಿಮಾನಗಳ ಖರೀದಿ ಪ್ರಸ್ತಾವವೇ ಇಲ್ಲ ಎಂಬ ಮಾಧ್ಯಮಗಳ ವರದಿ ಉಲ್ಲೇಖಿಸಿ ಟ್ವಿಟರ್‌ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೆ ಗೋಯಲ್ ಅವರು ತೀಕ್ಗಷ್ಣವಾಗಿಯೇ ಪ್ರತಿಕ್ರಿಯಿಸಿದ್ದು, ‘ರಫೇಲ್ ಮೇಲಿನ ರಾಹುಲ್ ಗಾಂಧಿ ಅವರ ಗೀಳು ಕಾಂಗ್ರೆಸ್‌ಗೆ ಹಾನಿ ಮಾಡುತ್ತಿದೆ ಎಂದು ಹಲವು ಕಾಂಗ್ರೆಸ್ ನಾಯಕರು ನಂಬಿದ್ದಾರೆ. ತಮ್ಮ ತಂದೆಯ ಪಾಪಗಳನ್ನು ತೊಳೆದುಕೊಳ್ಳುವ ರಾಹುಲ್ ಗಾಂಧಿ ಅವರ ರಫೇಲ್ ಗೀಳು ಕಾಂಗ್ರೆಸ್‌ಗೆ ಹಾನಿ ಮಾಡುತ್ತಿದೆ ಎಂದು ಅವರ ಮಿತ್ರರೇ ಹೇಳಿದ್ದಾರೆ. ಆದರೆ, ವ್ಯಕ್ತಿಯೊಬ್ಬ ಸ್ವಯಂ ವಿನಾಶಕ್ಕೆ ದೂಡಿಕೊಂಡಿರುವಾಗ ದೂರಲು ನಾವು ಯಾರು? ರಫೇಲ್ ವಿಚಾರದ ಮೇಲೆ 2024ರ ಲೋಕಸಭೆ ಚುನಾವಣೆಯನ್ನು ರಾಹುಲ್ ಗಾಂಧಿ ಎದರಿಸಲಿ’ ಎಂದು ವ್ಯಂಗ್ಯಭರಿತವಾಗಿ ಸವಾಲ್ ಹಾಕಿದ್ದಾರೆ.