ನವದೆಹಲಿ : ಕೊರೊನಾ ಸೋಂಕಿತರಿಗೆ ನೀಡಲಾಗುತ್ತಿರುವ ಪ್ಲಾಸ್ಮಾ ಥೆರಪಿಯನ್ನು ಮುಂದುವರೆಸಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ದೆಹಲಿಯಲ್ಲಿ ಪ್ಲಾಸ್ಮಾ ಥೆರಪಿ ಪ್ರಯೋಗ ನಿಲ್ಲುವುದಿಲ್ಲ. ಪ್ಲಾಸ್ಮಾ ಥೆರಪಿಯ ಆರಂಭಿಕ ಫಲಿತಾಂಶ ಉತ್ತಮವಾಗಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಸೋಂಕಿತ ವ್ಯಕ್ತಿಯೊಬ್ಬರಿಗೆ ಪ್ಲಾಸ್ಮಾ ಥೆರಪಿ ನಡೆಸಲಾಗಿದ್ದು, ಇದೀಗ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ದೆಹಲಿಯಲ್ಲಿ ಈ ವರೆಗೂ 1,100 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇತರೆ ಸೋಂಕಿತರ ಜೀವ ಉಳಿಸಲು ಪ್ಲಾಸ್ಮಾ ದಾನ ಮಾಡಿದ್ದಾರೆಂದು ಹೇಳಿದ್ದಾರೆ.
1 ಲಕ್ಷ ಜನರಲ್ಲಿ ಸರ್ಕಾರ 2,300 ಜನರಿಗೆ ಪರೀಕ್ಷೆ ನಡೆಸುತ್ತಿದೆ. ಪ್ಲಾಸ್ಮಾ ಥೆರಪಿ ಉತ್ತಮ ಫಲಿತಾಂಶ ನೀಡುತ್ತಿದ್ದು, ಪ್ರಯೋಗವನ್ನು ನಿಲ್ಲಿಸದೇ ಮುಂದುವರೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಐಐಟಿ ತರಬೇತಿಗೆಂದು ರಾಜಸ್ತಾನದ ಕೋಟಾಗೆ ತೆರಳಿ, ಸಂಕಷ್ಟ ಎದುರಿಸುತ್ತಿರುವ ದೆಹಲಿ ವಿದ್ಯಾರ್ಥಿಗಳ ಕುರಿತಂತೆ ಮಾತನಾಡಿದ ಅವರು, ಕೋಟಾದಲ್ಲಿ ದೆಹಲಿ ಕೆಲ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಅನುಮತಿ ಇಲ್ಲದೇ ನಾವು ಯಾವುದೇ ನಿರ್ಧಾರ ಕೈಗೊಳ್ಳುವಂತಿರಲಿಲ್ಲ. ಹೀಗಾಗಿ ನನ್ನ ಕೈಗಳನ್ನ ಕಟ್ಟಿಹಾಕಿದಂತಾಗಿತ್ತು. ಇದೀಗ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ವಿದ್ಯಾರ್ಥಿಗಳನ್ನು ಕರೆತರಲು 40 ಬಸ್ ಗಳನ್ನು ಕೋಟಾಗೆ ಕಳುಹಿಸಲಾಗುತ್ತದೆ ಎಂದಿದ್ದಾರೆ.