ಬೆಂಗಳೂರು: ಇದೇ ಮಾರ್ಚ್ 17ರಂದು ರಾಜರತ್ನ ಪುನೀತ್ ಅವರ ಹುಟ್ಟುಹಬ್ಬವಿದ್ದು, ಅದನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಸಕಲ ರೀತಿಯಲ್ಲೂ ಸಿದ್ಧರಾಗಿದ್ದರು. ಆದರೆ ಈಗ ಎಲ್ಲೆಡೆ ಇರುವ ಕೊರೋನಾ ಭೀತಿಯಿಂದಾಗಿ ಈ ಸಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಿಳಿಸಿದ್ದಾರೆ. ಕೊರೋನ ಹಿನ್ನೆಲೆಯಲ್ಲಿ ನಾನು ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ದಯವಿಟ್ಟು ಅಭಿಮಾನಿಗಳ್ಯಾರು ಮನೆ ಬಳಿ ಬರಬೇಡಿ ಎಂದು ಪುನೀತ್ ರಾಜ್ ಕುಮಾರ್ ಅವರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
“ಹುಟ್ಟು ಹಬ್ಬದಂದು ನಾನು ಮನೆಯಲ್ಲಿ ಇರುವುದಿಲ್ಲ. ದಯವಿಟ್ಟು ಮನೆ ಬಳಿ ಬಂದು ನಿರಾಶರಾಗದಿರಿ. ಕೊರೋನ ಸೋಂಕು ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶಕ್ಕೆ ನಾವೆಲ್ಲರೂ ಬದ್ಧರಾಗಿರೋಣ. ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳಿಗೆ ನಾವೆಲ್ಲರೂ ಸಹಕರಿಸಬೇಕು” ಎಂದು ವಿಡಿಯೋದಲ್ಲಿ ಪುನೀತ್ ವಿನಂತಿಸಿಕೊಂಡಿದ್ದಾರೆ.
ಇನ್ನು ಮಾರ್ಚ್ 17 ಅಂದ್ರೆ ಅಪ್ಪು ಅಭಿಮಾನಿಗಳಿಗೆ ಹಬ್ಬ. ಅಂದು ಪುನೀತ್ ಅವರಿಗೆ ವಿಶ್ ಮಾಡಲು ರಾಜ್ಯದ ಮೂಲೆ ಮೂಲೆಯಿಂದಲೂ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿ, ಅಪ್ಪು ನಿವಾಸದ ಬಳಿ ಬರ್ತ್ ಡೇ ಆಚರಿಸಿ ಸಂಭ್ರಮಿಸುತ್ತಾರೆ. ಆದ್ರೆ ಈ ಬಾರಿ ಬರ್ತ್ ಡೇ ಸಂಭ್ರಮಕ್ಕೆ ಕೊರೊನಾ ಅಡ್ಡಿಯಾಗಿದೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಸರ್ಕಾರ ಆದೇಶಿಸಿದೆ. ಸಭೆ ಸಮಾರಂಭಗಳಿಗೆ ಬ್ರೇಕ್ ಹಾಕಿದ್ದ ಸರ್ಕಾರ ಇಂದಿನಿಂದ ಒಂದು ವಾರದ ಕಾಲ ಬರ್ತ್ ಡೇ, ಮದುವೆ ಕಾರ್ಯಕ್ರಮಗಳನ್ನೂ ಸಹ ನಡೆಸದಿರುವಂತೆ ಆದೇಶಿಸಿದೆ.








