ರಾಷ್ಟ್ರದ ಸರ್ವಾಂಗೀಣ ಬೆಳವಣಿಗೆಗೆ ಪಿಎಂ ಗತಿಶಕ್ತಿ ಯೋಜನೆ ಹೊಸ ಆಯಾಮ ತಂದು ಕೊಡಲಿದೆ : ವಿ.ಸೋಮಣ್ಣ

1 min read

ರಾಷ್ಟ್ರದ ಸರ್ವಾಂಗೀಣ ಬೆಳವಣಿಗೆಗೆ ಪಿಎಂ ಗತಿಶಕ್ತಿ ಯೋಜನೆ ಹೊಸ ಆಯಾಮ ತಂದು ಕೊಡಲಿದೆ : ವಿ.ಸೋಮಣ್ಣ

ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತಕ್ಕಾಗಿ ವಿವಿಧ ಆರ್ಥಿಕ ವಲಯಗಳಿಗೆ ಬಹುಮುಖ ಸಂಪರ್ಕವನ್ನು ಕಲ್ಪಿಸುವ ಘನೋದ್ದೇಶದ ಪಿ ಎಂ ಗತಿಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಈ ಮಹಾತ್ವಾಕಾಂಕ್ಷಿ ಯೋಜನೆ ರಾಷ್ಟ್ರದ ಸರ್ವಾಂಗೀಣ ಬೆಳವಣಿಗೆಗೆ ಮತ್ತೊಂದು ಹೊಸ ಆಯಾಮ ತಂದು ಕೊಡಲಿದೆ.

ಈ ಮಹಾಯೋಜನೆ ಸಮಗ್ರ ಮೂಲಸೌಕರ್ಯ ನಿರ್ಮಿಸುವುದಲ್ಲದೇ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಏಕೀಕರಣಗೊಳಿಸುವುದರ ಜೊತೆಗೆ ಸಮಗ್ರ ಪ್ರಗತಿಯತ್ತ ಕೊಂಡೊಯ್ಯಲಿದೆ ಎಂದು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ನಗರದ ಲಲಿತ್ ಅಶೋಕ್ ನಲ್ಲಿ ನಡೆದ ಪಿಎಂ ಗತಿಶಕ್ತಿ ಯೋಜನೆಯ ಉದ್ಘಾಟನಾ ಸಮಾರಂಭದ ವಿಡಿಯೋ ಕಾನ್ಫೆರನ್ಸ್ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಪರವಾಗಿ ಪಾಲ್ಗೊಂಡು ಮಾತನಾಡಿದ ವಿ.ಸೋಮಣ್ಣ , ಈ ವೇದಿಕೆಯು ಉದ್ಯಮದ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ, ಸ್ಥಳೀಯ ಉತ್ಪಾದಕರಿಗೆ ಬೆಂಬಲ ನೀಡುವಲ್ಲಿ, ಉದ್ಯಮದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವಲ್ಲಿ ನೆರವು ನೀಡುವುದಲ್ಲದೆ, ಭವಿಷ್ಯದ ಆರ್ಥಿಕ ವಲಯಗಳ ಸೃಜನೆಗೆ ಇರುವ ಹೊಸ ಸಾಧ್ಯತೆಗಳನ್ನು ಅಭಿವೃದ್ಧಿಪಡಿಸುವಲ್ಲಿಯೂ ಸಹ ನೆರವಾಗುತ್ತದೆ ಎಂದು ಹೇಳಿದರು.

ಇನ್ನು, ರಾಜ್ಯದಲ್ಲಿ ಕೈಗಾರಿಕಾ-ಸ್ನೇಹಿ ವಾತಾವರಣವನ್ನು ನಿರ್ಮಿಸಲು ಮತ್ತು ವಾಣಿಜ್ಯ ವಹಿವಾಟನ್ನು ಸುಗಮಗೊಳಿಸಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ರಾಜ್ಯ ಸರ್ಕಾರವು ಕೈಗೊಳ್ಳುತ್ತಿದೆ ಮತ್ತು ರಾಷ್ಟೀಯ ಯೋಜನೆಯ ಅನುಸಾರವಾಗಿಯೇ ರಾಜ್ಯದಲ್ಲಿನ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಗೊಳಿಸಲು ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸುತ್ತಿದೆ. ನಮ್ಮ ರಾಜ್ಯ ಸರ್ಕಾರವು ಈಗಾಗಲೇ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಮೂಲಕ ರಾಜ್ಯದಲ್ಲಿನ ವಿವಿಧ ಭಾಗಗಳಲ್ಲಿ ವಿಮಾನ ನಿಲ್ಧಾಣಗಳನ್ನು ನಿರ್ಮಿಸುತ್ತಿದೆ. ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ವಲಯಗಳಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸುವುದರಿಂದ ವಿವಿಧ ಆರ್ಥಿಕ ವಲಯಗಳಿಗೆ ತ್ವರಿತಗತಿಯ ಸಂಪರ್ಕ ಸಿಗುವುದಲ್ಲದೇ ಆಯಾ ವಲಯಗಳಲ್ಲಿನ ಆರ್ಥಿಕ ಹಾಗೂ ಔದ್ಯಮಿಕ ಪ್ರಗತಿ ಹೆಚ್ಚುತ್ತದೆ.

V. Somanna saaksha tv

ರಾಜ್ಯದಲ್ಲಿನ ಹಾಗೂ ಅಂತರರಾಜ್ಯ ರೈಲು ಮಾರ್ಗಗಳ ನಿರ್ಮಾಣಕ್ಕೆ ಮತ್ತು ರೈಲ್ವೆ ಕೆಳಸೇತುವೆ/ಮೇಲುಸೇತುವೆಗಳ ನಿರ್ಮಾಣದಲ್ಲಿ ರಾಜ್ಯ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದು. ರೈಲು ಮಾರ್ಗಗಳ ನಿರ್ಮಾಣ ವೆಚ್ಚದಲ್ಲಿ ಶೇ.50ರ ಭಾಗವನ್ನು ರಾಜ್ಯ ಸರ್ಕಾರ ಭರಿಸುವುದಲ್ಲದೇ ಈ ಮಾರ್ಗಗಳ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ರಾಜ್ಯ ಸರ್ಕಾರ ಉಚಿತವಾಗಿ ನೀಡುತ್ತದೆ.

ರಾಜ್ಯದಲ್ಲಿನ ರೈಲು ಮಾರ್ಗಗಳ ಸಾಂದ್ರತೆಯನ್ನು ಹೆಚ್ಚಿಸುವ ದೃಷ್ಠಿಯಿಂದ ಈಗಾಗಲೇ 9 ನೂತನ ರೈಲು ಮಾರ್ಗಗಳ ನಿರ್ಮಾಣ ಯೋಜನೆಯನ್ನು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗಿದೆ. ಇನ್ನು, ಬಂದರುಗಳ ನಿರ್ಮಾಣ ಹಾಗೂ ಅಭಿವೃದ್ಧಿ ಜೊತೆಗೆ ಅಂತರ ಜಲ ಸಾರಿಗೆ ಮೂಲಕ ವಿವಿಧ ಆರ್ಥಿಕ ವಲಯಗಳನ್ನು ಬೆಸೆಯುತ್ತಿರುವ ರಾಜ್ಯ ಸರ್ಕಾರ ಪೂರ್ಣ ಪ್ರಮಾಣದ ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿದೆ. ರಾಜ್ಯದಲ್ಲಿ ರಾಷ್ಟ್ರೀಯ ನಿಯಂತ್ರಕ ಯೋಜನೆಯನ್ನು ಅನುಷ್ಠಾನಗೊಳಿಸಲು ಮತ್ತು ರಾಜ್ಯ ಮತ್ತು ರಾಷ್ಟ್ರಕ್ಕೆ ಹೆಚ್ಚಿನ ಬಂಡವಾಳವನ್ನು ಆಕರ್ಷಿಸಲು ಕೇಂದ್ರ ಸರ್ಕಾರದೊಂದಿಗೆ ಕಾರ್ಯ ನಿರ್ವಹಿಸಲು ಉತ್ಸುಕರಾಗಿದ್ದೇವೆ ಮತ್ತು ಈ ಯೋಜನೆಯ ಯಶಸ್ಸಿಗೆ ಎಲ್ಲಾ ಪಾಲುದಾರರ ಸಹಕಾರವನ್ನು ನಿರೀಕ್ಷಿಸುತ್ತೇನೆ ಎಂದು ಇದೇ ವೇಳೆ ಸಚಿವರು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಕೆಐಎಡಿಬಿ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಶಿವಶಂಕರ್, ಸರ್ಕಾರದ ಹೆಚ್ಚೂವರಿ ಮುಖ್ಯ ಕಾರ್ಯದರ್ಶಿಗಳಾದ ರಮಣ ರೆಡ್ಡಿ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd