ಬೆಂಗಳೂರಿನಲ್ಲಿ ವಿಘ್ನ ನಿವಾರಕ ಗಣೇಶನ ಜೊತೆ ಪ್ರಧಾನಿ ಮೋದಿ ಮತ್ತು ಸೈನಿಕರು…!
ಗಣೇಶ ಚತುರ್ಥಿ ಅನ್ನುವುದು ಕೇವಲ ಹಿಂದೂಗಳ ಪಾಲಿನ ಹಬ್ಬ ಮಾತ್ರವಲ್ಲ. ಅದು ಶ್ರದ್ಧಾ ಭಕ್ತಿಯ ಜೊತೆಗೆ ಒಗ್ಗಟ್ಟು, ಸಾಮರಸ್ಯ ಹಾಗೂ ಮನರಂಜನೆಯ ಒಟ್ಟಾರೆ ಸಮುಷ್ಟಿ. ಸ್ವಾತಂತ್ರ್ಯ ಪೂರ್ವದಲ್ಲಿ ಬಾಲಗಂಗಾಧರ ತಿಲಕ್ ಅವರು ಸಮಾಜದ ಒಗ್ಗಟ್ಟಿಗೆ ಮತ್ತು ಏಕತಾ ಭಾವನೆ ಮೂಡಿಸಲು ಗಣೇಶ ಚತುರ್ಥಿ ಹಬ್ಬದ ಆಚರಣೆಗೆ ಹೊಸ ಮುನ್ನಡಿ ಬರೆದಿದ್ದರು. ಆ ನಂತರ ದಕ್ಷಿಣ ಭಾರತದಲ್ಲಿ ಪ್ರಮುಖವಾಗಿ ಪ್ರತಿ ಗಣೇಶ ಹಬ್ಬವನ್ನು ವಿಭಿನ್ನವಾಗಿ, ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಗಣೇಶನಿಗೆ ನಿರ್ದಿಷ್ಟವಾದ ಆಕಾರವಿಲ್ಲ. ಹೀಗಾಗಿ ಕಲಾವಿದನ ಮನಸ್ಸಿಗೆ ಏನು ತೋಚುತ್ತದೋ ಆ ರೀತಿಯಲ್ಲಿ ಗಣೇಶನ ವಿಗ್ರಹಗಳನ್ನು ಮಾಡಲಾಗುತ್ತಿದೆ. ನಮ್ಮ ಪುರಾಣಗಳ ಅನ್ವಯ ಗಣೇಶ ಗಜವದನ, ಮೋದಕ ಹಸ್ತ, ಮೂಷಿಕ ವಾಹನ, ಉರಗ ಭೂಷಣ, ಡೊಳ್ಳು ಹೊಟ್ಟೆಯ ದೇವ. ಸಾಮಾನ್ಯವಾಗಿ ಈ ವಿಶೇಷಣಗಳನ್ನಿಟ್ಟುಕೊಂಡು ವಿನಾಯಕನ ಮೂರ್ತಿ ತಯಾರಿ ಮಾಡಲಾಗುತ್ತದೆ. ಇದೀಗ ಆಧುನಿಕ ಯುಗದ ಭರಾಟೆಯಲ್ಲಿ ಗಣೇಶನ ವಿಗ್ರಹಗಳನ್ನು ಕೂಡ ಹೈಫೈ ಟಚ್ ಅನ್ನು ಪಡೆದುಕೊಂಡಿದೆ. ಬಹುಶಃ ಕಾರ್ಗಿಲ್ ಯುದ್ಧದ ಬಳಿಕ ಗಣೇಶನ ಮಣ್ಣಿನ ವಿಗ್ರಹಗಳಿಗೆ ವಿಶೇಷ ರೂಪಗಳನ್ನು ನೀಡಲಾಗುತ್ತಿದೆ. ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಹೋಲಿಕೆ ಮಾಡಿಕೊಂಡು ವಿಗ್ರಹಗಳನ್ನು ನಿರ್ಮಿಸುವ ಪರಿಪಾಠ ಬೆಳೆದು ಬಂದಿದೆ. ಹೀಗಾಗಿ ಆಯಾ ವರ್ಷದ ವಿದ್ಯಮಾನಗಳ ಅನ್ವಯ ಗಣೇಶನಿಗೆ ಆಯಾ ವರ್ತಮಾನದ ಅವತಾರಗಳನ್ನು ಕಲಾವಿದನ ಸೃಜನಾತ್ಮಕ ದೃಷ್ಟಿಕೋನದ ಅನ್ವಯ ಕಲ್ಪಿಸುವ ಪರಿಪಾಠವಿದೆ.
ಗಣೇಶನ ಮೂರ್ತಿ ತಯಾರು ಮಾಡುವ ಕಲಾವಿದರು ಕೂಡ ತಮ್ಮ ಮಾರುಕಟ್ಟೆಯ ವ್ಯಾಪ್ತಿಯನ್ನು ಹೆಚ್ಚಿಸಲು ಈ ರೀತಿಯ ತಂತ್ರಗಳನ್ನು ಬಳಸುತ್ತಿದ್ದಾರೆ. ಗಣೇಶ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹೀಗಾಗಿ ಕಲಾವಿದನ ಕೈಯಿಂದ ಅರಳುವ ವಿಭಿನ್ನ ರೀತಿಯ ಗಣೇಶ ಮೂರ್ತಿಗಳಿಗೆ ಭಾರೀ ಬೇಡಿಕೆಯೂ ಇರುತ್ತದೆ. ಈ ಎಲ್ಲಾ ದೃಷ್ಟಿಕೋನಗಳಲ್ಲಿ ಗಣೇಶ ಹಬ್ಬ ಕಮರ್ಷಿಯಲ್ ಟಚ್ ಅನ್ನು ಸಹ ಪಡೆದುಕೊಂಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ಕೋವಿಡ್ ಗಣೇಶ ಮತ್ತು ಗಣೇಶನ ಜೊತೆ ಮೋದಿ ಮತ್ತು ಸೈನಿಕರು ಇರುವ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಪೂರ್ವ ಲಡಾಕ್‍ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಇತ್ತೀಚೆಗೆ ಚೀನಾ ದಾಳಿ ಮಾಡಿದ್ದು ನಿಮಗೆ ನೆನಪಿರಬಹುದು. ಈ ದಾಳಿಯಲ್ಲಿ ಭಾರತದ ಸುಮಾರು 20 ಸೈನಿಕರು ಹುತಾತ್ಮರಾಗಿದ್ದರು. ಆ ಘಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಗಲ್ವಾನ್ ಕಣಿವೆಗೆ ಭೇಟಿ ನೀಡಿದ್ದರು. ಪ್ರಧಾನಿಯ ಈ ಭೇಟಿಯ ದೃಶ್ಯವನ್ನಿಟ್ಟುಕೊಂಡು ಗಣೇಶ ಮೂರ್ತಿ ತಯಾರು ಮಾಡುವ ಕಲಾವಿದರು ಮೋದಿಯೊಂದಿಗೆ ವಿಘ್ನ ವಿನಾಶಕ ಗಣಪತಿ ಇದ್ದಾನೆ ಎಂಬ ಚಿತ್ರಣಕ್ಕೆ ಮಣ್ಣಿನಿಂದ ರೂಪ ನೀಡಿದ್ದಾರೆ. . ಇದು ಬೆಂಗಳೂರಿನ ಮಾವಳ್ಳಿ ಬಳಿ, ಗಣೇಶ ಮೂರ್ತಿಯೊಂದಿಗೆ, ಪ್ರಧಾನಿ ಮೋದಿ ಮತ್ತು ಸೈನಿಕರು ಜೊತೆಗಿರುವ ಚಿತ್ರಣ.
ಈ ವರ್ಷ ಕೊರೋನಾ ವೈರಸ್ ನಿಂದಾಗಿ ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುವಂತಿಲ್ಲ. ಆದ್ರೂ ಗಣೇಶ ಮೂರ್ತಿ ತಯಾರು ಮಾಡುವ ಕಲಾವಿದರು ಸುಮ್ಮನೆ ಕೂತಿಲ್ಲ. ಈ ವರ್ಷ ಅಂದುಕೊಂಡಂತೆ ಕೋವಿಡ್ ಗಣೇಶನ ಮೂರ್ತಿ ಮಾರುಕಟ್ಟೆಗೆ ಬಂದೇ ಬರುತ್ತೆ ಎಂದು ನಾವು ಎಣಿಕೆ ಮಾಡುವಷ್ಟರಲ್ಲಿ ಈಗಾಗಲೇ ತರಹೇವಾರಿ ಅವತಾರಗಳ ವಿಘ್ನ ವಿನಾಶಕನ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ.