ಹೊಳಲೂರು ಗ್ರಾಮಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿ – Saaksha Tv
ಶಿವಮೊಗ್ಗ: ಏಪ್ರಿಲ್ 24ರಂದು ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ.
ಪಂಚಾಯತ್ ರಾಜ್ ದಿವಸ್ ಆಚರಿಸುವ ಸಲುವಾಗಿ ಗ್ರಾಮಕ್ಕೆ ಪ್ರಧಾನಿಯವರು ಆಗಮಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಗ್ರಾಮವನ್ನು ಸಜ್ಜುಗೊಳಿಸಲಾಗುತ್ತಿದ್ದು ಪ್ರಧಾನಿ ಬರಲು ಇನ್ನೂ ಒಂದೂವರೆ ತಿಂಗಳು ಬಾಕಿ ಇದ್ದಾಗಲೆ ಕೆಲ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ.
ಹೊಳಲೂರು ಗ್ರಾಮದಲ್ಲಿ ಸುಮಾರು 5 ಸಾವಿರ ಜನಸಂಖ್ಯೆ ಇದ್ದು, ಹಾಲಿ ಗ್ರಾಮವನ್ನು ಹೈಟೆಕ್ ಗ್ರಾಮವನ್ನಾಗಿ ಮಾರ್ಪಡಿಸಲಾಗುತ್ತಿದೆ. ಕಾಂಕ್ರೀಟ್ ರಸ್ತೆ, ಬಾಕ್ಸ್ ಚರಂಡಿ, ಕಸ ವಿಲೇವಾರಿ ಘಟಕ, ಜಲ ಜೀವನ್ ಯೋಜನೆ ಕಾಮಗಾರಿ, ಇಂಗುಗುಂಡಿ, ಶೌಚಾಲಯ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳು ಭರದಿಂದ ನಡೆಯುತ್ತಿವೆ.
ಹೊಳಲೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಜೊತೆಗೆ ಭಾರತೀಯ ಅಂಚೆ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ದೂರವಾಣಿ ಸಂಪರ್ಕ ಕೇಂದ್ರ, ಪಶು ವೈದ್ಯಕೀಯ ಕೇಂದ್ರ, ಸರ್ಕಾರಿ ಶಾಲೆಗಳು, ಡಿಜಿಟಲ್ ಗ್ರಂಥಾಲಯ, ಸಂತೆ ಮಾರುಕಟ್ಟೆ ಸೇರಿದಂತೆ ಎಲ್ಲ ಸೌಲಭ್ಯಗಳು ಲಭ್ಯವಿದೆ.
ಇನ್ನೂ ಹೊಳಲೂರು ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 11 ಜನ ಸದಸ್ಯರ ಪೈಕಿ 6 ಮಹಿಳಾ ಸದಸ್ಯರು, 5 ಪುರುಷ ಸದಸ್ಯರು ಇದ್ದಾರೆ. ಅಲ್ಪ ಸಂಖ್ಯಾತ ಸಮುದಾಯದವರು ಅಧ್ಯಕ್ಷರಾಗಿದ್ದಾರೆ. ಗ್ರಾಮದ ಹೊರ ಭಾಗದಲ್ಲಿನ 15 ಎಕರೆ ಜಾಗದಲ್ಲಿ ಪ್ರಧಾನಿ ಮೋದಿ ಅವರು ಗ್ರಾಮ ಪಂಚಾಯಿತಿಯ ಕಾರ್ಯ ವೈಖರಿಯ ಬಗ್ಗೆ ಅಂದು ಮಾತನಾಡಲಿದ್ದಾರೆ. 15 ಎಕರೆ ಜಾಗದಲ್ಲಿ 5 ಎಕರೆಯಲ್ಲಿ ಹೆಲಿಪ್ಯಾಡ್ ಮಾಡಲಾಗುತ್ತದೆ. ಉಳಿದ ಜಾಗದಲ್ಲಿ ವೇದಿಕೆ ನಿರ್ಮಾಣ ಮಾಡಲಾಗುತ್ತದೆ.
ಒಟ್ಟಾರೆ ಪ್ರಧಾನಿ ಮೋದಿ ಅವರು ಹೊಳಲೂರಿಗೆ ಆಗಮಿಸುತ್ತಿರುವುದರಿಂದ ಇಡೀ ಗ್ರಾಮವೆ ಮದುವಣಗಿತ್ತಿಯಂತೆ ಶೃಗಾಂರಗೊಳ್ಳುತ್ತಿದೆ. ಅಲ್ಲದೇ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಸಂಪೂರ್ಣ ಗ್ರಾಮ ಹೈಟೆಕ್ ಗ್ರಾಮವಾಗಲಿದೆ.