ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಲಾಡಾಕ್ನ ಇಂಡೋ-ಚೀನಾ ಗಡಿಗೆ ದಿಢೀರ್ ತೆರಳಿರುವುದು ನೆರೆಯ ಡ್ರ್ಯಾಗನ್ ಚೀನಾಗೆ ಢವಢವ ಶುರುವಾಗಿದೆ.
ಯಾವುದೇ ಸುಳಿವು ನೀಡದೇ ಲೇಹ್ನ ಗಡಿ ಪ್ರದೇಶಕ್ಕೆ ಭೇಟಿ ನೀಡಿರುವ ಮೋದಿ, ಗಡಿಯಲ್ಲಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿದ್ದಾರೆ.

ಜೂನ್15ರಂದು ನಡೆದಿದ್ದ ಭಾರತ-ಚೀನಾ ಸೇನಾ ಘರ್ಷಣೆಯ ನಂತರ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಭೇಟಿ ನೆರೆಯ ಚೀನಾ ರಾಷ್ಟ್ರವನ್ನು ಕಂಗೆಡುವಂತೆ ಮಾಡಿದೆ.
ಗಾಲ್ವಾನ್ ಗಡಿ ಘರ್ಷಣೆಯಲ್ಲಿ ಭಾರತದ 20 ಯೋಧರು ಮೃತಪಟ್ಟಿದ್ದಾರೆ. ಘಟನೆ ಬಳಿಕ ಗಡಿಯಲ್ಲಿ ಶಾಂತಿ ಸ್ಥಿತಿ ಮುಂದುವರೆಸಲು ಎರಡು ದೇಶಗಳ ರಕ್ಷಣಾ ಮುಖ್ಯಸ್ಥರ ಮಟ್ಟದ ಮಾತುಕತೆಗಳು ಮುಂದುವರೆದಿವೆ.
ಗಾಲ್ವಾನ್ ಘರ್ಷಣೆ ಬಗ್ಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಮೇಲೆ ಮುಗಿ ಬಿದ್ದಿವೆ. ಪ್ರಧಾನಿಗೆ ಗಡಿಯಲ್ಲಿ ಏನಾಗುತ್ತಿದೆ ಎಂದು ತಿಳಿದಿಲ್ಲ. ಚೀನಾಕ್ಕೆ ಮೋದಿ ಹೆದರಿ ಭೂಮಿ ಬಿಟ್ಟು ಕೊಟ್ಟಿದ್ದಾರಾ ಎಂದು ರಾಹುಲ್ಗಾಂಧಿ ಟೀಕಾ ಪ್ರಹಾರ ನಡೆಸಿದ್ದಾರೆ.
ಈ ಬೆಳವಣಿಗೆಳ ಬೆನ್ನಲ್ಲೇ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಭೂಸೇನೆಯ ಜನರಲ್ ಎಂ.ಎಂ ನರವಾಣೆ ಜತೆ ಸಮುದ್ರಮಟ್ಟದಿಂದ 11 ಸಾವಿರ ಅಡಿ ಎತ್ತರದಲ್ಲಿರುವ ಲಡಾಕ್ನ ನಿಮ್ಮು ಪ್ರದೇಶಕ್ಕೆ ಮೋದಿ ಬಂದಿಳಿದಿದ್ದಾರೆ.
ಸೇನಾ ಹೆಲಿಕಾಪ್ಟರ್ನಲ್ಲಿ ಬಂದ ಮೋದಿ, ಯೋಧರೊಂದಿಗೆ ಗಡಿಯಲ್ಲಿನ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿದರು. ನಂತರ ಸೇನಾ ಆಸ್ಪತ್ರೆಗೂ ಭೇಟಿ ನೀಡಿ ಗಾಲ್ವಾನ್ ಘರ್ಷಣೆಯಲ್ಲಿ ಗಾಯಗೊಂಡ ಯೋಧರ ಆರೋಗ್ಯ ವಿಚಾರಿಸಿದರು.
ಮೋದಿ ಭೇಟಿಗೆ ಚೀನಾ ಗರಂ
ಪ್ರಧಾನಿ ನರೇಂದ್ರ ಮೋದಿ ಅವರು ಲಡಾಕ್ಗೆ ಭೇಟಿ ನೀಡಿದ್ದಕ್ಕೆ ನೆರೆಯ ಚೀನಾ ಗರಂ ಆಗಿದೆ. ಗಡಿಯಲ್ಲಿ ಉಂಟಾಗಿರುವ ಉದ್ವಿಘ್ನ ಸ್ಥಿತಿ ತಿಳಿಗೊಳಿಸಲು ಮಿಲಿಟರಿ ಹಾಗೂ ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹದಗೆಡಿಸುವ ಯವುದೇ ಪ್ರಯತ್ನವನ್ನ ಮಾಡಬಾರದು ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಲೋ ಲಜಿನ್ ಭಾರತಕ್ಕೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.









