ಪೊಗರು ಸಿನಿಮಾ ಪ್ರದರ್ಶನ ನಿಲ್ಲಿಸಿ : ಚಿತ್ರದ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ
ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಬಿಡುಗಡೆ ದಿನದಿಂದಲೂ ಬ್ಲಾಕ್ ಬಸ್ಟರ್ ಟಾಕ್ ಪಡೆದುಕೊಂಡು ಗಲ್ಲಾಪಟ್ಟಿಗೆ ದೋಚುತ್ತಿದೆ. ಮೂರು ಭಾಷೆಗಳಲ್ಲಿ ರಿಲೀಸ್ ಆಗಿರುವ ಪೊಗರು ಚಿತ್ರಕ್ಕೆ ಎಲ್ಲಾ ಭಾಷೆಗಳಲ್ಲೂ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದೆ. ಸದ್ಯ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯುತ್ತಿರುವ ಪೊಗರು ಸಿನಿಮಾಗೆ ವಿವಾದಗಳೂ ಕೂಡ ಸುತ್ತಿಕೊಳ್ಳುತ್ತಿವೆ.
ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯ ಬ್ರಾಹ್ಮಣ ಸಮುದಾಯದವರು ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ. ಅಲ್ಲದೇ ಸಿನಿಮಾದಲ್ಲಿರುವ ಆ ದೃಶ್ಯಗಳಿಗೆ ಕತ್ತರಿ ಹಾಕಬೇಕು ಅಂತಾ ಒತ್ತಾಯಿಸಿದ್ದಾರೆ. ಈ ಮಧ್ಯೆ ಈ ಬಗ್ಗೆ ಸುದ್ದಿ ಮಾಧ್ಯಮದ ಜೊತೆ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಪೆÇಗರು ಸಿನಿಮಾ ಪ್ರದರ್ಶನವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.
ಕೆಲವರು ಯಾವುದೋ ಸಮಾಜಕ್ಕೆ ಅಪಮಾನ ಮಾಡುವ ಮೂಲಕ ತಮಗೆ ಪ್ರಚಾರ ಮತ್ತು ಹಣ ಸಂಪಾದನೆ ಮಾಡಬಹುದು ಎಂದು ಅಂದು ಕೊಂಡಿದ್ದಾರೆ. ಇದು ವಿಕೃತ ಮಾನಸಿಕತೆ. ಸಿನಿಮಾ ನಿರ್ಮಾಣ ಮಾಡುವಾಗಲೇ ಈ ರೀತಿಯ ದೃಶ್ಯಗಳಿಂದ ಹೆಚ್ಚು ಪ್ರಚಾರ ಪಡೆಯಬಹುದು ಎಂಬುದು ಅವರ ಮನಸ್ಸಿನಲ್ಲಿದೆ ಇದನ್ನು ಮೊದಲು ಹೊಗಲಾಡಿಸಬೇಕು. ಸಿನಿಮಾದಲ್ಲಿರುವ ವಿವಾದಾತ್ಮಕ ದೃಶ್ಯಗಳಿಗೆ ಮೊದಲು ಸೆನ್ಸಾರ್ ಹಾಕಿ, ಸಿನಿಮಾ ಪ್ರದರ್ಶನ ಮಾಡಲಿ. ಅಲ್ಲಿಯವರೆಗೂ ಸಿನಿಮಾ ಪ್ರದರ್ಶನ ನಿಲ್ಲಿಸಲಿ. ಹಿಂದೂಗಳು ಶಾಂತಿ ಪ್ರಿಯರು ಎಂಬ ಭಾವನೆ ಇದೆ ಇದು ನಮ್ಮ ದೌರ್ಬಲ್ಯವಲ್ಲ. ವಿಕೃತ ಮನಸ್ಸಿನವರು ಕೂಡಲೇ ಹಿಂದೂ ಧರ್ಮಕ್ಕೆ ಮಾಡಿರುವ ಅಪಮಾನದಿಂದ ಎಚ್ಚೆತ್ತುಕೊಳ್ಳಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಕರೆಕೊಟ್ಟಿದ್ದಾರೆ.
