ವಿಜಯಪುರ: ಕಳೆದ 21 ವರ್ಷಗಳ ಹಿಂದೆ ಶಿಕ್ಷೆಯಾಗಿದ್ದರೂ ತಪ್ಪಿಸಿಕೊಂಡು ತಲೆ ಮರೆಸಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈಗ ವಿಜಯಪುರ ಜಿಲ್ಲಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಜಯಪುರ ಗಾಂಧಿಚೌಕ್ ಪೊಲೀಸರು 21 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ರಾಜೂ ಉರ್ಫ್ ಬಸವರಾಜ ನಾಯಕನನ್ನು ಈಗ ಬಂಧಿಸಿದ್ದಾರೆ. ಈತ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ ಗ್ರಾಮದ ಜಮೀನೊಂದಲ್ಲಿ ತನ್ನ ಹೆಸರು ವಿಳಾಸ ಬದಲಾವಣೆ ಮಾಡಿಕೊಂಡು ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.
2001 ರಲ್ಲಿ ಖೋಟಾ ನೋಟು ಚಲಾವಣೆ ಸಂಗ್ರಹ ಆರೋಪದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರು ಮೂಲದ ರಾಜೂ ಉರ್ಫ್ ಬಸವರಾಜ ನಾಯಕ ಎಂಬಾತನನ್ನು ವಿಜಯಪುರ ನಗರದ ಗಾಂಧಿಚೌಕ್ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಖೋಟ ಆನೋಟು ಚಲಾವಣೆ ಹಾಗೂ ಸಂಗ್ರಹದ ಆರೋಪ ಸಾಬೀತಾದ ಕಾರಣ ಆರೋಪಿಯಾಗಿದ್ದ ರಾಜೂ ಉರ್ಫ್ ಬಸವರಾಜ ನಾಯಕಗೆ 10 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿತ್ತು. ಆದರೆ, ಆರೋಪಿ ವಿಜಯಪುರದ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದ.
ಹೈಕೋರ್ಟ್ ಕೂಡ ಕೆಳಗಿನ ಕೋರ್ಟ್ ನ ಆದೇಶವನ್ನೇ ಎತ್ತಿ ಹಿಡಿದಿತ್ತು. ನಂತರ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದ. ಅಲ್ಲಿಯೂ ಈತನಿಗೆ ಸೋಲಾಗಿತ್ತು. ಆಗ ಈತ ನಾಪತ್ತೆಯಾಗಿದ್ದ. ಕುಟುಂಬಸ್ಥರು, ಗ್ರಾಮಸ್ಥರ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದ್ದ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.