ವಿಕಲಚೇತನ ಮಹಿಳೆ ಮೇಲೆ ಪೊಲೀಸ್ ಅಧಿಕಾರಿಯ ದರ್ಪ Saaksha Tv
ಬೆಂಗಳೂರು: ವಿಕಲಚೇತನ ಮಹಿಳೆಯ ಮೇಲೆ ಎಎಸ್ಐ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜನವರಿ 24 ರಂದು ಗಾಡಿ ಟೋಯಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ, ಹಲಸೂರ್ ಗೇಟ್ ಸಂಚಾರಿ ಟೋಯಿಂಗ್ ಎಎಸ್ ಐ ನಾರಾಯಣ್ ಮೇಲೆ ವಿಕಲಚೇತನ ಮಹಿಳೆ ಕಲ್ಲೇಟು ನೀಡಿದ್ದಾರೆ. ಪರಿಣಾಮ ಎಎಸ್ಐ ಮುಖಕ್ಕೆ ಕಲ್ಲು ತಾಗಿ ರಕ್ತ ಬಂದಿದೆ. ಇದರಿಂದ ಸಿಟ್ಟಿಗೆದ್ದ ಎಎಸ್ಐ, ಕೂಡಲೇ ವಾಹನದಿಂದ ಕೆಳಗಿಳಿದು ಮಹಿಳೆಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಬೂಟಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಸದ್ಯ ಘಟನೆ ಸಂಬಂಧ ಸರ್ಕಾರಿ ಕೆಲಸಕ್ಕೆ ಅಡ್ಡಿ ಆರೋಪದಲ್ಲಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.
ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಅಂಗವಿಕಲ ಮಹಿಳೆ ಮೇಲೆ ಎಎಸ್ಐ ಹಲ್ಲೆ ಮಾಡಿರುವುದನ್ನು ಕಾಣಬಹುದಾಗಿದೆ. ಪೊಲೀಸ್ ಅಧಿಕಾರಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಂಗವಿಕಲ ಮಹಿಳೆ ಮೇಲೆ ಹಲ್ಲೆ ಮಾಡಬಾರದಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಮಾಹಿತಿ ಪ್ರಕಾರ, ಎಎಸ್ಐ ಮೇಲೆ ಮಹಿಳೆ ಎರಡು ಬಾರಿ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಮಹಿಳೆಯ ಹಲ್ಲೆಯಿಂದ ಕೋಪಗೊಂಡ ಎಎಸ್ಐ ನಿಂದಲೂ ಮಹಿಳೆ ಮೇಲೆ ರಸ್ತೆಯಲ್ಲೆ ಹಲ್ಲೆಗೈದಿರುವುದಾಗಿ ತಿಳಿದುಬಂದಿದೆ. ಘಟನೆ ಬಳಿಕ ಎಎಸ್ ಐ ನಾರಾಯಣ್ ಅವರು ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.