ಹೆಚ್ ಡಿಕೆ ವಿರುದ್ಧ ವಾಗ್ದಾಳಿ : ರಾಕ್ ಲೈನ್ ವೆಂಕಟೇಶ್, ಸುಮಲತಾ ನಿವಾಸಕ್ಕೆ ಭದ್ರತೆ
ಸಂಸದೆ, ನಟಿ ಸುಮಲತಾ ಅಂಬರೀಶ್ ಹಾಗೂ ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆಗೆ ಬೆಂಗಳೂರು ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಸುಮಲತಾ ಹಾಗೂ ರಾಕ್‌ಲೈನ್ ವೆಂಕಟೇಶ್ ಅವರು ಹೆಚ್.ಡಿ.ಕುಮಾರಸ್ವಾಮಿ ಕುರಿತಂತೆ ಹೇಳಿಕೆ ನೀಡಿದ್ದು, ಮಾಜಿ ಸಿಎಂ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಜೊತೆಗೆ ರಾಕ್‌ಲೈವ್ ವೆಂಕಟೇಶ್ ಹೆಚ್ ಡಿಕೆಗೆ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.
ಇದೇ ಕಾರಣಕ್ಕೆ ಇಂದು ಬೆಳಗ್ಗೆ ಜೆಡಿಎಸ್ ಕಾರ್ಯಕರ್ತರು ರಾಕ್ ಲೈನ್ ವೆಂಕಟೇಶ್ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು.. ಇದೀಗ ರಾಕ್ ಲೈವ್ ವೆಂಕಟೇಶ್ ಮನೆಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಅವರ ನಿವಾಸಕ್ಕೆ ಹೋಗುವ ದಾರಿಯಲ್ಲಿ ಬ್ಯಾರಿಕೇಟ್ ಹಾಕಲಾಗಿದ್ದು ಹೋಗಿ ಬರುವ ವಾಹನಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಸುಮಲತಾ ಅವರ ಬೆಂಗಳೂರಿನ ಮನೆಯ ಬಳಿಯೂ 40ಕ್ಕೂ ಹೆಚ್ಚು ಪೊಲೀಸರು, ಕೆಎಸ್ ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ರಾಕ್‌ಲೈವ್ ವೆಂಕಟೇಶ್ ಮುಂದೆ ಪೊಲೀಸರು ಕಾವಲಿದ್ದಾರೆ.
ಜೆಡಿಎಸ್ ಕಾರ್ಯಕರ್ತರು ಸುಮಲತಾ ಹಾಗೂ ರಾಕ್‌ಲೈನ್ ವೆಂಕಟೇಶ್ ಮನೆಯ ಮುಂದೆ ಪ್ರತಿಭಟನೆ ಮಾಡುವ ಸಾಧ್ಯತೆ ಇದೆ. ಹಾಗಾಗಿ ಇಬ್ಬರ ಮನೆಗೆ ಬಿಗಿ ಭದ್ರತೆಯನ್ನು ಪೊಲೀಸರು ಒದಗಿಸಿದ್ದಾರೆ. ರಾಕ್ ಲೈನ್ ಮನೆಯ ಬಳಿ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರು, ಸುಮಲತಾ ಅಂಬರೀಶ್ ಹಾಗೂ ಅಂಬರೀಶ್ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದಕ್ಕೆ ಸಿಟ್ಟಿಗೆದ್ದಿದ್ದ ರಾಕ್‌ಲೈವ್ ವೆಂಕಟೇಶ್ ನಿನ್ನೆ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ‘ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಗಿದ್ದೇ ಕುಮಾರಸ್ವಾಮಿ. ಅವರು ತಮ್ಮ ದುರ್ಬುದ್ಧಿಯನ್ನು ಬಿಡಬೇಕು. ಇಂಥಹಾ ಕುತಂತ್ರಗಳು ಹೆಚ್ಚು ದಿನ ನಡೆಯುವುದಿಲ್ಲ. ಅಂಬರೀಶ್ ಬಗ್ಗೆ ಮಾತನಾಡಲು ಅವನ್ಯಾರು, ಅಂಬಿ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು ಎಂದಿದ್ದರು.
ಇದೀಗ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಮುಂದಾಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ರಾಕ್ ಲೈನ್ ವೆಂಕಟೇಶ್ ಮಾತನಾಡುವ ಸ್ವಾತಂತ್ರ್ಯ ಕೆಲವರಿಗೆ ಮಾತ್ರ ಇದೆಯಾ. ನಾನು ಯಾರ ಮನಸ್ಸಿಗೂ ನೋವು ಮಾಡಿಲ್ಲ.ಕೆಲವರು ತಮಗೆ ಮಾತ್ರ ವಾಕ್ ಸ್ವಾತಂತ್ರ್ಯ ಇದೆ ಅಂತ ತಿಳಿದುಕೊಂಡಿದ್ದಾರೆ. ನಾನು ಯರ ಮನಸ್ಸಿಗೂ ನೋವು ಮಾಡುವ ಹೇಳಿಕೆ ನೀಡಿಲ್ಲ. ಇಂದು ಅವರ ಬೆಂಬಲಿಗರು ಯಾಕೆ ಪ್ರತಿಭಟನೆ ಮಾಡಿದ್ರು ಅನ್ನೋದು ನನಗೆ ಗೊತ್ತಿಲ್ಲ.
ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆಯಿರಲಿ : ಹೆಚ್‍ಡಿಕೆಗೆ ರಾಕ್ ಲೈನ್ ವಾರ್ನಿಂಗ್
ಎಲ್ಲ ಪಕ್ಷದವರೂ ನನ್ನನ್ನು ರಾಜಕಾರಣಕ್ಕೆ ಕರೆದಿದ್ರೂ ಹೋಗಿಲ್ಲ. ನಾನು ಮಂಡ್ಯ ಮತ್ತು ರಾಜ್ಯ ರಾಜಕಾರಣಕ್ಕೂ ನಾನು ಬರಲ್ಲ. ಈ ಹಿಂದೆಯೇ ರಾಜಕಾರಣಕ್ಕೆ ನಾನು ಬರಲ್ಲ ಅಂತ ಹೇಳಿದ್ದು, ಈಗ್ಯಾಕೆ ಬರಲಿ. ನಾನು ಮೊದಲಿನಿಂದಲೂ ಅಂಬರೀಶ್ ಅವರ ಜೊತೆ ಚುನಾವಣೆಗೆ ಹೋಗಿದ್ದೇನೆ. ನಮ್ಮಿಬ್ಬರದ್ದು ಸುಮಾರು 20 ವರ್ಷಗಳ ಬಾಂಧವ್ಯ. ಕಾರಣಾಂತರಗಳಿಂದ ಸುಮಲತಾ ಅವರು ರಾಜಕಾರಣಕ್ಕೆ ಪ್ರವೇಶ ಮಾಡುವಂತಾಯ್ತು.
ಅಂಬರೀಶ್ ತೋರಿಸುತ್ತಿದ್ದ ಪ್ರೀತಿ ಮತ್ತು ಬಾಂಧವ್ಯಕ್ಕಾಗಿ ಸುಮಲತಾ ಚುನಾವಣೆಗೆ ನಿಂತಾಗ ಅವರ ಬೆನ್ನುಲಾಬಿಗೆ ನಿಂತಿದ್ದೆ ಹೊರತು ಬೇರಾವ ಕಾರಣಕ್ಕೂ ಅಲ್ಲ. ನಾನು ಯಾವತ್ತೂ ಸಹ ಮಂಡ್ಯ ರಾಜಕಾರಣಕ್ಕೆ ಹೋಗಿಲ್ಲ. ಕಳೆದ ಎರಡು ವರ್ಷಗಳಿಂದ ಈ ರೀತಿಯ ಮಾತುಗಳ ಬಂದ್ರೂ ನಾನು ಎಲ್ಲಿಯೂ ರಾಜಕಾರಣಕ್ಕೆ ಸಂಬಂಧಿಸಿದ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪಗಳು ಬರೋದು ಸಹಜ. ಆದ್ರೆ ಒಬ್ಬ ಮಹಿಳೆ ಬಗ್ಗೆ ಇಷ್ಟು ಕೆಳಮಟ್ಟದ ಹೇಳಿಕೆ ನೀಡುತ್ತಾರೆ. ಮಾಧ್ಯಮಗಳ ಮುಂದೆ ಉತ್ತರ ನೀಡುವ ಸುಮಲತಾ ಮನೆಯಲ್ಲಿ ಬಂದು ಕಣ್ಣೀರು ಹಾಕುತ್ತಾರೆ. ಹೇಗಾದ್ರೂ ಮಾಡಿ ಸುಮಲತಾ ಅವರನ್ನ ಮಂಡ್ಯದಿಂದ ಕಳುಹಿಸಬೇಕು ಎಂದು ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ. ಅಂಬರೀಶ್ ಅವರ ಸ್ಮಾರಕದ ವಿಚಾರ ಬಂದಾಗ ಮಧ್ಯೆ ಪ್ರವೇಶ ಮಾಡಿದ್ದೇನೆಯೇ ಹೊರತು ರಾಜಕಾರಣದಲ್ಲಿ ಅಲ್ಲ ಎಂದು ಹೇಳಿದರು.
ಡಾ.ರಾಜ್‍ಕುಮಾರ್ ಮತ್ತು ಡಾ.ಅಂಬರೀಶ್ ನಿಧನರಾದಾಗ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿದ್ದರು. ಅಂಬರೀಶ್ ಅವರ ಸ್ಮಾರಕಕ್ಕೆ ಕುಮಾರಸ್ವಾಮಿ ಅವರೇ ಜಾಗ ನೀಡಿದ್ದು, ಅವತ್ತು ಯಾರೇ ಸಿಎಂ ಆಗಿದ್ರೂ ಇದೇ ಕೆಲಸ ಮಾಡುತ್ತಿದ್ದರು. ಇದೇ ವಿಷಯವಾಗಿ ಹಿರಿಯ ನಟರಾದ ದೊಡ್ಡಣ್ಣ ಸಹ ಹೇಳಿಕೆ ನೀಡಿದ್ದಾರೆ. ಅಂಬರೀಶ್ ಸ್ಮಾರಕದ ವಿಚಾರವಾಗಿ ಮಾತನಾಡಿದ್ದೇನೆ ಎಂದು ಹೇಳಿದರು. ಎರಡೂ ಸಮಯದಲ್ಲಿಯೇ ಕುಮಾರಸ್ವಾಮಿ ಅವರ ಪಕ್ಕದಲ್ಲಿಯೇ ನಾನು ನಿಂತಿದ್ದೇನೆ. ಅಲ್ಲೊಂದು ಹೇಳಿಕೆ, ಇಲ್ಲೊಂದು ಹೇಳಿಕೆ ನೀಡುತ್ತಾರೆ. ಚಿತ್ರರಂಗದ ವಿಷಯ ಬಂದಾಗ ನಾನ್ಯಾಕೆ ಉತ್ತರ ನೀಡಬಾರದು ಎಂದು ಪ್ರಶ್ನಿಸಿದರು.








