ನವದೆಹಲಿ: ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ (Swati Maliwal) ಮೇಲೆ ದೌರ್ಜನ್ಯ ನಡೆಸಿರುವ ಆರೋಪ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದಕ್ಕೆ ಸಾಕಷ್ಟು ಟೀಕೆ-ಆಕ್ರೋಶ ವ್ಯಕ್ತವಾಗಿದ್ದವು. ಇದರ ಬೆನ್ನಲ್ಲಿಯೇ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಆಪ್ತ ಸಹಾಯಕನ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಅರವಿಂದ್ ಕೇಜ್ರಿವಾಲ್ ಆಪ್ತ ಬಿಭವ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಈ ಕುರಿತು ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಸಂಸದೆ ಸ್ವಾತಿ ಮಲಿವಾಲ್ ಹೇಳಿಕೆ ನಂತರ ಐಪಿಸಿ 354, 323, 506,509 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ಈ ವೇಳೆ ಮಾತನಾಡಿದ ಸಂಸದೆ, ದೌರ್ಜನ್ಯ ನಡೆದ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕೆಲವು ದಿನಗಳಿಂದ ನನಗೆ ತುಂಬಾ ನೋವಾಗಿತ್ತು. ಚಾರಿತ್ರ್ಯಹರಣ ಮಾಡಲು ಯತ್ನಿಸಿದವರು ಬೇರೆಯವರ ಸೂಚನೆ ಮೇರೆಗೆ ಮಾಡುತ್ತಿದ್ದಾರೆ. ಅವರನ್ನೂ ದೇವರು ನೆಮ್ಮದಿಯಿಂದ ಇಡಲಿ ಎಂದು ಬೇಡಿಕೊಂಡಿದ್ದೇನೆ. ದೇಶದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.