ಬೆಂಗಳೂರು: ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಪೊಲೀಸರು ಲಾಠಿ ಬೀಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಕೆಲವರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ರೆ, ಮತ್ತೆ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಪ್ರಕಟಣೆಯೊಂದನ್ನು ಹೊರಡಿಸಿದ್ದು,ಇಂದಿನಿಂದ ಲಾಠಿಗಳನ್ನು ಬಳಸದಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಕೆಎಸ್ ಆರ್‌ಪಿ ಸಿಬ್ಬಂದಿ ಹೊರತುಪಡಿಸಿ ಪೊಲೀಸರು ಲಾಠಿಗಳನ್ನು ಠಾಣೆಯಲ್ಲಿಯೇ ಬಿಟ್ಟು ಸಮವಸ್ತ್ರದಲ್ಲಿ ಬಂದೋಬಸ್ತ್ ನಲ್ಲಿರಬೇಕು. ಈಗಾಗಲೇ 11,246 ಪಾಸ್ ಗಳನ್ನು ವಿರತಣೆ ಮಾಡಲಾಗಿದೆ. ಪಾಸ್ ಗಳು ಇಲ್ಲದೆ ವಾಹನಗಳು ಓಡಾಡುವಂತಿಲ್ಲ. ನಿಯಮ ಮೀರಿದರೆ ವಾಹನಗಳನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆಯಬೇಕು, ಸಾರ್ವಜನಿಕರ ಜೊತೆ ಸೌಜನ್ಯದಿಂದ ಇರಬೇಕು. ಹಾಲು ವ್ಯಾಪಾರಿಗಳು, ಪತ್ರಿಕಾ ವಿತರಕರಿಗೂ ತೊಂದರೆ ಕೊಡಬಾರದು ಎಂದು ಪ್ರಕಟಣೆಯಲ್ಲಿ ಭಾಸ್ಕರ್ ರಾವ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.