ಬೆಂಗಳೂರು, ಜೂನ್ 8: ಚಿರಂಜೀವಿ ಸರ್ಜಾ ಅವರ ಅಕಾಲಿಕ ಸಾವಿಗೆ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ಚಿರಂಜೀವಿ ಸರ್ಜಾ ಅವರ ಅಕಾಲಿಕ ಸಾವಿಗೆ ಕಂಬನಿ ಮಿಡಿದಿರುವ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೆಗೌಡ ಅವರು ‘ಕನ್ನಡ ಚಿತ್ರರಂಗದ ಉದಯೋನ್ಮುಖ ನಟರಾದ ಚಿರಂಜೀವಿ ಸರ್ಜಾ ಅವರು ನಿಧನರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ.ಇವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರಿಗೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬ ಹಾಗೂ ನಾಡಿನ ಜನತಗೆ ಈ ದುಃಖವನ್ನು ಭರಿಸುವ ಶಕ್ತಿ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚಿರಂಜೀವಿ ಸರ್ಜಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ‘ಪ್ರಖ್ಯಾತ ಕಲಾ ಕುಟುಂಬದಿಂದ ಬಂದಿದ್ದ ಚಿರಂಜೀವಿ ಸರ್ಜಾ ಕುಟುಂಬ, ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದ ಸುಂದರ್ ರಾಜ್ ಕುಟುಂಬದೊಂದಿಗೆ ಬೆರೆತಿತ್ತು. ಹಾಲು ಜೇನಿನಂತೆ ಕೂಡಿದ್ದ ಈ ಕುಟುಂಬಕ್ಕೆ ಚಿರಂಜೀವಿ ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ’ ಎಂದು ಸಂತಾಪ ಸೂಚಿಸಿದ್ದಾರೆ.

‘ಚಂದನವನದ ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ.
ಇನ್ನೂ ಬಾಳಿ, ಬದುಕಿ ನಮ್ಮೆಲ್ಲರನ್ನೂ ತನ್ನ ನಟನೆಯ ಮೂಲಕ ರಂಜಿಸಬೇಕಿದ್ದ ಈ ಯುವ ನಾಯಕ ನಟನ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತನು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೀಡಲೆಂದು ಪ್ರಾರ್ಥಿಸುತ್ತೇನೆ.’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.









