ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ರುದ್ರ ತಾಂಡವ ಮುಂದುವರಿಸಿದೆ. ಸೋಂಕು ಹರಡುವುದನ್ನು ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಇದರಿಂದ ರಾಜ್ಯದಲ್ಲಿ ಸಂಪನ್ಮೂಲ ಕ್ರೋಢೀಕರಣ ಕುಂಠಿತವಾಗಿ ಆರ್ಥಿಕ ಮುಗ್ಗಟ್ಟು ಎದುರಾಗುತ್ತಿದೆ. ಈ ಸಂದರ್ಭದಲ್ಲಿ ಒಟ್ಟಾಗಿ ನಿಲ್ಲಬೇಕಾಗಿದ್ದ ಜನಪ್ರತಿನಿಧಿಗಳು ರಿಲೀಫ್ ಫಂಡ್ ರಾಜಕೀಯ ಮಾಡುತ್ತಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಸಿಎಂ ಬಿಎಸ್ ವೈ, ಮನವಿ ಮಾಡಿದ್ದರು. ಆದರೆ, ರಾಜ್ಯದಲ್ಲಿ ಮುಖ್ಯಮಂತ್ರಿಯವರ ಮನವಿಗೆ ಪ್ರತಿಪಕ್ಷಗಳಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಒಂದು ಕಡೆ ಕಾಂಗ್ರೆಸ್ ತನ್ನ ಪಕ್ಷದ ಎಲ್ಲಾ ಶಾಸಕರು ಕಾಂಗ್ರೆಸ್ ಪರಿಹಾರ ನಿಧಿಗೆ ತಲಾ ಒಂದು ಲಕ್ಷ ರೂ. ದೇಣಿಗೆ ನೀಡುವಂತೆ ಸೂಚನೆ ನೀಡಿದೆ. ಇದನ್ನು ಆಧರಿಸಿ ಎಲ್ಲಾ ಶಾಸಕರು ಒಂದೊಂದು ಲಕ್ಷ ರೂ. ದೇಣಿಗೆಯನ್ನು ಪಕ್ಷದ ನಿಧಿಗೆ ನೀಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಸೇರಬೇಕಾಗಿದ್ದ ಈ ಹಣ ಪಕ್ಷದ ಕಚೇರಿಗೆ ಸಲ್ಲಿಕೆಯಾಗಿದೆ. ಮತ್ತೊಂದೆಡೆ ಜೆಡಿಎಸ್ ಪಾಳಯದಿಂದ ಕೆಲ ಶಾಸಕರು ವೈಯಕ್ತಿಕವಾಗಿ ದೇಣಿಗೆ ನೀಡಿದ್ದಾರೆಯೇ ಹೊರತು ಸಾಮೂಹಿಕವಾಗಿ ಈ ಕುರಿತು ಸ್ಪಂದನೆ ಸಿಕ್ಕಿಲ್ಲ.
ವಿಪಕ್ಷಗಳಿಂದ ಬಿಜೆಪಿಗೆ ಟಾಂಗ್ ?
ಆರಂಭದಲ್ಲಿ ಬಿಜೆಪಿ ಸರ್ಕಾರ ತಾನೇ ಎಲ್ಲವನ್ನು ಸರಿಪಡಿಸುವ ಹುಮ್ಮಸ್ಸಿನಲ್ಲಿಯೇ ಹೆಜ್ಜೆ ಹಾಕಿತ್ತು. ವಿರೋಧ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ವಿಧಾನಸಭೆ ನಡೆಯುತ್ತಿದ್ದರೂ ಸರ್ಕಾರ ಕೊರೊನಾ ವಿಷಯದಲ್ಲಿ ವಿಪಕ್ಷದ ನೆರವು ಯಾಚಿಸುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಕಾಂಗ್ರೆಸ್ ತನ್ನದೇ ದಾರಿಯಲ್ಲಿ ನಡೆದಿದೆ. ಕಾಂಗ್ರೆಸ್ ಶಾಸಕರು ಕೊಟ್ಟ ನೆರವು, ದೇಣಿಗೆಯನ್ನು ಬಳಸಿಕೊಂಡು ಬಿಜೆಪಿ ತನ್ನ ಪ್ರಚಾರ ಹೆಚ್ಚಿಸಿಕೊಳ್ಳಲು ಅವಕಾಶ ಕೊಡುವ ಬದಲಾಗಿ ಪಕ್ಷವೇ ದೇಣಿಗೆ ಸಂಗ್ರಹಿಸಿ ಅದರಲ್ಲಿ ರಚನಾತ್ಮಕ ಕೆಲಸ ಮಾಡುವ ಬಗ್ಗೆ ಚರ್ಚೆಗಳು ನಡೆದಿದೆ.
ಇದಲ್ಲದೆ ಆರಂಭದಲ್ಲಿ ಬಿಜೆಪಿ ತನ್ನ ಆರ್ ಎಸ್ ಎಸ್ ಕಾರ್ಯಕರ್ತರಿಗೆ ಮಾತ್ರ ಕೊರೊನಾ ಸಂದರ್ಭದಲ್ಲಿ ಕ್ಷೇತ್ರಕ್ಕಿಳಿದು ಕೆಲಸ ಮಾಡಲು ಅನುಮತಿ ನೀಡಿತ್ತು. ಸರ್ಕಾರದ ಈ ನಿರ್ಧಾರಗಳಿಂದ ಕೆರಳಿರುವ ವಿಪಕ್ಷಗಳು ದೇಣಿಗೆ ರಾಜಕಾರಣದ ಮೂಲಕ ತಿರುಗೇಟು ನೀಡುತ್ತಿವೆ ಎನ್ನಲಾಗಿದೆ.
ಅಲ್ಲದೆ ತಮ್ಮ ಪಕ್ಷಗಳ ವತಿಯಿಂದಲೇ ಬಡವರಿಗೆ ಸ್ಪಂದಿಸುವ ಕಾರ್ಯಕ್ಕೆ ವಿಪಕ್ಷಗಳು ಮುಂದಾಗಿವೆ.








