ಮಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ ಇಂದು ಮತದಾನ ನಡೆದಿದ್ದು, ಎಲ್ಲೆಡೆ ಶಾಂತ ರೀತಿಯಲ್ಲಿ ಮುಕ್ತಾಯವಾಗಿದೆ.
ಮೊದಲ ಹಂತದ ಮತದಾನ ಇಂದು ಸಂಜೆ ಮುಕ್ತಾಯವಾಗಿದೆ. ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಶೇ. 100ರಷ್ಟು ಮತದಾನವಾಗಿದ್ದು, ಎಲ್ಲರ ಗಮನ ಸೆಳೆದಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ (Banjarau Male) ಎಂಬ ಕುಗ್ರಾಮದಲ್ಲಿ ಮತದಾರರು ಹಕ್ಕು ಚಲಾಯಿಸಲು ಹಿಂದೇಟು ಹಾಕಿದವರಿಗೆ ಸೆಡ್ಡು ಹೊಡೆದಿದ್ದಾರೆ. ಈ ಗ್ರಾಮದಲ್ಲಿ ನೂರಕ್ಕೆ ನೂರರಷ್ಟು ಮತದಾನವಾಗಿದೆ. ಗ್ರಾಮದಲ್ಲಿರುವ 111 ಮತದಾರರು ಕೂಡ ಮತದಾನ ಮಾಡುವ ಮೂಲಕ ದಾಖಲೆ ಮಾಡಿಡೆ.
ಕುಗ್ರಾಮವಾದರೂ ತಮ್ಮ ಹಕ್ಕು ಚಲಾಯಿಸುವಲ್ಲಿ ಮಾತ್ರ ಗ್ರಾಮಸ್ಥರು ಎಲ್ಲರಿಗೂ ಮಾದರಿಯಾಗಿದ್ದಾರೆ. ಜಿಲ್ಲೆಯಲ್ಲಿ ಕೂಡ ಉತ್ತಮ ಮತದಾನವಾಗಿದೆ. ಸಂಜೆ 5 ಗಂಟೆ ವೇಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 71.83% ರಷ್ಟು ಮತದಾನವಾಗಿದೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬ್ರಿಜೇಶ್ ಚೌಟಾ, ಕಾಂಗ್ರೆಸ್‍ನಿಂದ ಪದ್ಮರಾಜ್ ರಾಮಯ್ಯ ಅಖಾಡದಲ್ಲಿದ್ದಾರೆ.