2026ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಸಶಸ್ತ್ರ ಸಂಘರ್ಷದ ರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಮೆರಿಕದ ಪ್ರತಿಷ್ಠಿತ ಥಿಂಕ್ ಟ್ಯಾಂಕ್ ಕೌನ್ಸಿಲ್ ಆನ್ ಫಾರಿನ್ ರಿಲೇಷನ್ಸ್ (CFR) ಎಚ್ಚರಿಕೆ ನೀಡಿದೆ. ಈ ಕುರಿತಾಗಿ ಅಮೆರಿಕದ ವಿದೇಶಾಂಗ ನೀತಿ ತಜ್ಞರ ಸಮೀಕ್ಷೆಯ ಆಧಾರದಲ್ಲಿ ಪ್ರಕಟಿಸಿದ ವರದಿಯಲ್ಲಿ, ದಕ್ಷಿಣ ಏಷ್ಯಾದ ಭದ್ರತಾ ಸ್ಥಿತಿಗತಿ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಲಾಗಿದೆ.
CFR ವರದಿ ಪ್ರಕಾರ, ಭಾರತ–ಪಾಕಿಸ್ತಾನ ನಡುವಿನ ಸಂಘರ್ಷದ ಸಾಧ್ಯತೆಯನ್ನು ಮಧ್ಯಮ ಮಟ್ಟದ ಅಪಾಯ ಎಂದು ವರ್ಗೀಕರಿಸಲಾಗಿದೆ. ಗಡಿ ಪ್ರದೇಶಗಳಲ್ಲಿ ನಡೆಯುವ ಭಯೋತ್ಪಾದಕ ಚಟುವಟಿಕೆಗಳು, ಉಗ್ರ ದಾಳಿಗಳು ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ ಉಂಟಾಗುವ ಸೈನಿಕ ಕ್ರಮಗಳು ಸಂಘರ್ಷಕ್ಕೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ ಎಂದು ವರದಿ ತಿಳಿಸಿದೆ.
ವಿಶೇಷವಾಗಿ ಕಾಶ್ಮೀರ ವಿಷಯ, ಗಡಿ ನಿಯಂತ್ರಣ ರೇಖೆ (LoC) ಬಳಿ ನಡೆಯುವ ಉಲ್ಲಂಘನೆಗಳು ಹಾಗೂ ಉಗ್ರ ಸಂಘಟನೆಗಳ ಚಟುವಟಿಕೆಗಳು ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಒಂದು ಸಣ್ಣ ಉಗ್ರ ದಾಳಿ ಅಥವಾ ತಪ್ಪು ಲೆಕ್ಕಾಚಾರವೂ ದೊಡ್ಡ ಮಟ್ಟದ ಸೈನಿಕ ಘರ್ಷಣೆಗೆ ಕಾರಣವಾಗುವ ಭೀತಿಯಿದೆ ಎಂದು CFR ಹೇಳಿದೆ.
ಆದರೆ ಇತ್ತ ಎರಡೂ ರಾಷ್ಟ್ರಗಳಲ್ಲಿನ ಅಣುಶಸ್ತ್ರ ಸಾಮರ್ಥ್ಯ ಮತ್ತು ಅಂತಾರಾಷ್ಟ್ರೀಯ ಒತ್ತಡಗಳು ಸಂಪೂರ್ಣ ಯುದ್ಧವನ್ನು ತಪ್ಪಿಸಲು ನಿರ್ಬಂಧಕ ಅಂಶಗಳಾಗಬಹುದು ಎಂಬ ಅಭಿಪ್ರಾಯವನ್ನೂ ವರದಿ ವ್ಯಕ್ತಪಡಿಸಿದೆ. ಆದರೂ, ರಾಜತಾಂತ್ರಿಕ ಸಂವಾದದ ಕೊರತೆ ಮತ್ತು ಪರಸ್ಪರ ಅನುಮಾನಗಳು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಈ ಹಿನ್ನೆಲೆ, ಭಾರತ–ಪಾಕಿಸ್ತಾನ ಸಂಬಂಧಗಳಲ್ಲಿ ರಾಜತಾಂತ್ರಿಕ ಪ್ರಯತ್ನಗಳನ್ನು ಬಲಪಡಿಸುವ ಅಗತ್ಯವಿದೆ ಎಂಬ ಸಂದೇಶವನ್ನು ಈ ವರದಿ ಜಾಗತಿಕ ಸಮುದಾಯಕ್ಕೆ ನೀಡುತ್ತಿದೆ.








