ಬೆಂಗಳೂರು : ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಡ್ ಗಳ ಕೊರತೆ ಎದುರಾದ ಹಿನ್ನೆಲೆ ರಾಜ್ಯ ಸರ್ಕಾರ ಬೆಡ್ ಗಳನ್ನು ಒದಗಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ತಿಳಿಸಿತ್ತು. ಅದರಂತೆ ಕೆಲ ಆಸ್ಪತ್ರೆಗಳು ಸರ್ಕಾರ ಕೇಳಿದ ಬೆಡ್ ಗಳನ್ನು ನೀಡಿದ್ದು, ಇನ್ನೂ ಕೆಲವು ಬೆಡ್ ಗಳನ್ನು ನೀಡಲು ನಿರಾಕರಿಸಿವೆ. ಈ ವಿಚಾರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಬೆಡ್ ಒದಗಿಸದ ಖಾಸಗಿ ಆಸ್ಪತ್ರೆಗಳ ಮಾಲೀಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳ ಜೊತೆ ನಡೆಸಿದ ಸಭೆಯಲ್ಲಿ ಸಚಿವರು ಪಾಲ್ಗೊಂಡಿದ್ದರು. ಇದೇ ವೇಳೆ ನಮ್ಮ ಜೊತೆ ಮಾಡಿಕೊಂಡಿರುವ ಒಪ್ಪಂದದಂತೆ ಶೇಕಡಾ 50ರಷ್ಟು ಬೆಡ್ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ ಒಪ್ಪಂದ ಪಾಲಿಸದಿದ್ದರೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಟ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ಓಪಿಡಿ ಕ್ಲೋಸ್ ಮಾಡಿಸಬೇಕಾಗುತ್ತೆ. ಇಲ್ಲಾಂದ್ರೆ, ಆಸ್ಪತ್ರೆಯ ಮಾನ್ಯತೆಯನ್ನ ರದ್ದು ಮಾಡಲೂ ಹಿಂದೆ ಮುಂದೆ ನೋಡಲ್ಲ ಎಂದು ಸೂಚನೆ ನೀಡಿದ್ದಾರೆ.