ಬೆಂಗಳೂರು: ಪೆನ್ ಡ್ರೈವ್ ಕೇಸ್ ನಲ್ಲಿ ಎಸ್ ಐಟಿ ಅಧಿಕಾರಿಗಳ ವಶದಲ್ಲಿರುವ ಪ್ರಜ್ವಲ್ ರೇವಣ್ಣ (Prajwal Revanna) ಪ್ರಶ್ನೆಗಳಿಗೆ ಉತ್ತರಿಸದೆ ಅಸಹಕಾರ ತೋರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಎಸ್ ಐಟಿ ಅಧಿಕಾರಿಗಳ ಯಾವುದೇ ಪ್ರಶ್ನೆಗೂ ರೇವಣ್ಣ ಸಮರ್ಪಕ ಹಾಗೂ ಸರಿಯಾದ ಉತ್ತರ ನೀಡುತ್ತಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಘಟನೆಯೊಂದು ರಾಜಕೀಯ ಪಿತೂರಿ. ಷಡ್ಯಂತ್ರದಿಂದಾಗಿ ಪ್ರಕರಣದಲ್ಲಿ ನನ್ನನ್ನು ಸೇರಿಸಲಾಗಿದೆ. ನಿಮ್ಮ ಕೆಲಸ ನೀವು ಮಾಡಿ. ನಾನೇನು ಮಾತನಾಡುವುದಿಲ್ಲ ಎಂದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬರುತ್ತಿದೆ.
ಅಲ್ಲದೇ, ನಮ್ಮ ವಕೀಲರನ್ನು ಕೇಳಿ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದಿದ್ದಾರೆ ಎಂದು ಕೂಡ ತಿಳಿದು ಬಂದಿದೆ. ತನಿಖಾಧಿಕಾರಿ ಎಷ್ಟೇ ಪ್ರಶ್ನೆ ಮಾಡಿದರೂ ನಮ್ಮ ವಕೀಲರನ್ನು ಕೇಳಬೇಕು ಎಂದು ಹೇಳಿದ್ದಾರೆ. ಏನೇ ಉತ್ತರ ಕೊಡುವುದಿದ್ದರೂ ವಕೀಲರ ಬಳಿ ಮಾತನಾಡಿ ಆ ನಂತರ ಉತ್ತರಿಸುತ್ತೇನೆ ಎಂದಿದ್ದಾರೆ ಎಂಬುವುದು ಮೂಲಗಳಿಂದ ತಿಳಿದು ಬಂದಿದೆ.
ಶುಕ್ರವಾರ ಪ್ರಜ್ವಲ್ ರೇವಣ್ಣನನ್ನು ಎಸ್ ಐಟಿ ಅಧಿಕಾರಿಗಳು ಕೋರ್ಟ್ ಮುಂದೆ ಹಾಜರು ಪಡಿಸಿದ್ದರು. ಕೋರ್ಟ್ 6 ದಿನಗಳ ಕಾಲ ಎಸ್ ಐಟಿಗೆ ನೀಡಿ ಆದೇಶ ಹೊರಡಿಸಿದ್ದಾರೆ.