ಬೆಂಗಳೂರು: ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.
ಪ್ರಜ್ವಲ್ ರೇವಣ್ಣ(Prajwal Revanna) ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ (High Court) ವಜಾಗೊಳಿಸಿದೆ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳು ಪ್ರಜ್ವಲ್ ವಿರುದ್ಧ ದಾಖಲಾಗಿವೆ. ಈ ಪೈಕಿ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ನಿರಾಕರಿಸಲಾಗಿದೆ. ಅಲ್ಲದೇ, ಮತ್ತೊಂದು ಪ್ರಕರಣದ ಅರ್ಜಿ ವಿಚಾರಣೆ ಬಾಕಿಯಿದೆ.
ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮೂರು ಅರ್ಜಿಗಳನ್ನು ವಜಾಗೊಳಿಸಿದೆ. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿದ್ದರೆ, ಸಿಐಡಿ ಸೈಬರ್ ಸೆಲ್ ನಲ್ಲಿ ದಾಖಲಾಗಿದ್ದ ಇನ್ನೆರಡು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದರು. ಹೀಗಾಗಿ ಪ್ರಜ್ವಲ್ ಗೆ ಜೈಲು ಗತಿ ಎನ್ನುವಂತಾಗಿದೆ.