ಬೆಂಗಳೂರು: ವಿಪ ಸದಸ್ಯ ಸಿ.ಪಿ. ಯೋಗೇಶ್ವರ್ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಮೂಲಕ ಟಿಕೆಟ್ ಸಿಗದಿದ್ದರೂ ಪಕ್ಷೇತರರಾಗಿ ಕಣಕ್ಕೆ ಇಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಬಿಜೆಪಿ ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ (CP Yogeshwar) ರಾಜೀನಾಮೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ (Congress) ಕೂಡ ಅಲರ್ಟ್ ಆಗಿದ್ದು, ಸೆಳೆಯುವ ಯತ್ನ ಮಾಡುತ್ತಿದೆ ಎನ್ನಲಾಗಿದೆ.
ಒಂದು ವೇಳೆ ಯೋಗೇಶ್ವರ್ ಕಾಂಗ್ರೆಸ್ ಸೇರುವುದಾದರೆ, ಬರಮಾಡಿಕೊಳ್ಳಲು ಕೂಡ ಆ ಪಕ್ಷ ಸನ್ನದ್ಧವಾಗಿದೆ. ಅವರು ಪಕ್ಷ ಸೇರುವ ಕುರಿತು ಸಿದ್ಧತೆ ಮಾಡಿಕೊಳ್ಳುವಂತೆ ಕೂಡ ಡಿಕೆಶಿ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಯೋಗೇಶ್ವರ್ ಬಿಜೆಪಿಯಿಂದ (BJP) ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಚನ್ನಪಟ್ಟಣ ತನ್ನ ಕ್ಷೇತ್ರವಾಗಿರುವ ಕಾರಣ ಜೆಡಿಎಸ್ ಅಭ್ಯರ್ಥಿಯನ್ನು ಹಾಕಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಕೊನೆಯವರೆಗೂ ಯೋಗೇಶ್ವರ್ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಯಡಿಯೂರಪ್ಪ ಮೈತ್ರಿ ಧರ್ಮ ಪಾಲನೆ ಮಾಡಬೇಕೆಂದು ಹೇಳಿದ ಬೆನ್ನಲ್ಲೇ ಯೋಗೇಶ್ವರ್ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ. ಈಗ ಅವರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ.








