ದಶಕಗಳಿಂದ ನಡೆಯುತ್ತಿದೆ ಶ್ರಮಜೀವಿ ರೈತರ ಮೇಲೆ ನಿರಂತರ ದೌರ್ಜನ್ಯ; ಚಿತ್ರದುರ್ಗದ ಅನ್ನದಾತರಿಗೆ ಅನ್ಯಾಯವೆಸಗುತ್ತಿದ್ದಾರಾ ಗಣಿ ಉದ್ಯಮಿ ಪ್ರವೀಣ್ ಚಂದ್ರ?:
ರೈತ ಈ ನಾಡಿನ ಅನ್ನದಾತ, ರೈತ ಈ ದೇಶದ ಬೆನ್ನೆಲುಬು.. ಈ ಮಾತುಗಳು ತುಕ್ಕು ಹಿಡಿದು ಸವಕಳಿಯಾಗಿವೆ. ರೈತನ ಹೆಸರನಲ್ಲಿ ಇವೇ ಮಾತುಗಳನ್ನು ಓತಪ್ರೇತವಾಗಿ ಭಾಷಣ ಮಾಡಿ ತೌಡು ಕುಟ್ಟುವ ರಾಜಕೀಯ ನಾಯಕರು, ರೈತ ಸಂಕಷ್ಟದಲ್ಲಿದ್ದಾಗ ಮಾತ್ರ ಜಾಣ ಮೌನ ತಾಳುತ್ತಾರೆ.
ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಈ ದೇಶದ ಆತ್ಮ, ನಾಡಿ ಮಿಡಿತ ಎಂದೆಲ್ಲಾ ಕರೆಸಿಕೊಳ್ಳುವ ರೈತನ ಬದುಕು ಮಾತ್ರ ಹಸನಾಗಿಲ್ಲ. ಈ ದೇಶವನ್ನು ಆಳಿದ ಎಲ್ಲಾ ಪಕ್ಷಗಳೂ ರೈತನಿಗೆ ಹಿಡಿಯಷ್ಟಾದರೂ ನೆಮ್ಮದಿ ಕೊಡಿಸಲು ಯತ್ನಿಸಲಿಲ್ಲ. ರೈತನ ಆತ್ಮಹತ್ಯೆ ಎನ್ನುವುದು ಈಗ ಸಾಮಾಜಿಕ ಪಿಡುಗಾಗಿದೆ.
ಈ ಜ್ವಲಂತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬದ್ಧತೆ ಮಾತ್ರ ಯಾವ ಜನಪ್ರತಿನಿಧಿಗಳಿಗೂ ಇಲ್ಲ. ರೈತ ಕೇವಲ ಚುನಾವಣಾ ಪ್ರಣಾಳಿಕೆ ಘೋಷಣೆಯ ವಸ್ತು ಮಾತ್ರವೇ ಆಗಿ ಉಳಿದುಹೋಗಿದ್ದಾನೆ..
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿರುವ ಸುಮಾರು ಎಂಟು ಹತ್ತು ಗ್ರಾಮಗಳ ರೈತರು ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ. ಇದು ನಿನ್ನೆ ಮೊನ್ನೆಯ ಗೋಳಲ್ಲ;
ಕಳೆದ 10 ವರ್ಷಗಳಿಂದ ಇವರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಲೇ ಇದೆ. ಒಂದು ಕಾಲದಲ್ಲಿ ನೆಮ್ಮದಿಯಾಗಿ ಕೃಷಿ ಮಾಡಿಕೊಂಡು ಪರಿಸರ ಮತ್ತು ವನ್ಯಜೀವಿಗಳ ಜೊತೆ ಸುಖ ಶಾಂತಿಗಳಿಂದ ಸಣ್ಣ ಆದಾಯದಲ್ಲೇ ಸಮೃದ್ಧ ಜೀವನ ನಡೆಸುತ್ತಿದ್ದ ಕೃಷಿಕರು ಈಗ ಪ್ರತಿದಿನ ಒಂದಿಲ್ಲೊಂದು ಸಂಕಷ್ಟಗಳಿಗೆ ತುತ್ತಾಗುತ್ತಿದ್ದಾರೆ.
ತಮಗೊಂದು ನ್ಯಾಯ ಕೊಡಿಸಿ ಎಂದು ಇವರು ಹತ್ತಿಳಿಯದ ಕಚೇರಿಗಳಿಲ್ಲ, ತಲುಪದ ಅಧಿಕಾರಿಗಳಿಲ್ಲ, ಗೋಳು ಹೇಳಿಕೊಳ್ಳದ ಜನಪ್ರತಿನಿಧಿಗಳಿಲ್ಲ, ಸಂಪರ್ಕಿಸದ ಸಂಘಟನೆಗಳಿಲ್ಲ. ಆದರೆ ಈ ವರೆಗೆ ಇವರಿಗೆ ಯಾವ ಅಧಿಕಾರಿಗಳಿಂದಲೂ, ಜನನಾಯಕರಿಂದಲೂ, ಸಂಘ ಸಂಸ್ಥೆಗಳಿಂದಲೂ ನ್ಯಾಯ ಸಿಕ್ಕಿಲ್ಲ; ಯಾವ ಮಾಧ್ಯಮಗಳೂ ಇವರ ಅಹವಾಲು ಕೇಳಿಲ್ಲ.
ಅನ್ನದಾತನ ಬೆನ್ನಿಗೆ ಬರೆ – ಬಲಿಪೀಠಕ್ಕೆ ಬಡ ರೈತ – ಕಾಯಕಯೋಗಿಯ ಆಕ್ರಂದನ – ಕೃಷಿಕನ ಬದುಕು ಮೂರಾಬಟ್ಟೆ:
2007ರಲ್ಲಿ ಹೆಗ್ಗೆರೆಯಲ್ಲಿ ಪ್ರಕಾಶ್ ಸ್ಪಾಂಡ್ ಐರನ್ ಪ್ರವೇಟ್ ಲಿಮಿಟೆಡ್ ಕಾರ್ಖಾನೆ ಶುರುವಾಗುವ ಮೊದಲು ಸ್ಥಳೀಯ ರೈತರಿಂದ ಕೇವಲ ಎಕರೆಗೆ 60 ಸಾವಿರಕ್ಕೆ ಮಾತಾಡಿ ಜಮೀನು ಖರೀದಿಸಲಾಯಿತು. ಹೆಗ್ಗೆರೆ ಗ್ರಾಮದ ವ್ಯಾಪ್ತಿಯಲ್ಲಿರುವ ಸರ್ವೇ ನಂಬರ್ 42 ಮತ್ತು 43ರಲ್ಲಿ ಮೊದಲು ಸಣ್ಣದಾಗಿ ಶುರು ಮಾಡಿದ ಈ ಉಕ್ಕು ತಯಾರಿಕಾ ಕಾರ್ಖಾನೆ ಈಗ ದೈತ್ಯಾಕಾರವಾಗಿ ಬೆಳೆದುಕೊಂಡಿದೆ.
ಜೊತೆಗೆ ಸುತ್ತಮುತ್ತಲಿನ ಉಳುವ ಸಮೃದ್ದ ಎರೆಮಣ್ಣಿನ ವ್ಯವಸಾಯು ಭೂಮಿಯನ್ನು ಆಪೋಷನ ತೆಗೆದುಕೊಂಡಿದೆ. ಕಾರ್ಖಾನೆಯ ಸುತ್ತಮುತ್ತಲಿನ ಸುಮಾರು 100 ಎಕರೆಗೂ ಹೆಚ್ಚಿನ ಬಫರ್ ಜೋನ್ ನಲ್ಲಿ ಈಗಾಗಲೆ ರೈತರು ವ್ಯವಸಾಯ ಚಟುವಟಿಕೆಗೆ ಅಂತ್ಯ ಹಾಡಿದ್ದಾರೆ. ಈ ಜಮೀನಿನಲ್ಲಿ ಗರಿಕೆ ಹುಲ್ಲೂ ಸಹ ವಿಷವುಂಡೇ ಹುಟ್ಟಬೇಕು; ಅಷ್ಟು ಕಲುಷಿತಗೊಂಡಿದೆ
ಈ ಸುತ್ತಲಿನ ಪರಿಸರ. ಈ ಕಾರ್ಖಾನೆ ಬರುವ ಮೊದಲು ಸಾಣೇಕೆರೆ ಪಂಚಾಯತ್ ವ್ಯಾಪ್ತಿಯಲ್ಲಿನ ಕುರುಚಲು ಕಾಡಿನಲ್ಲಿ ನೂರಾರು ಜಿಂಕೆಗಳು ಕೃಷ್ಣಮೃಗಗಳು ರೈತರೊಂದಿಗೆ ಬದುಕುತ್ತಿದ್ದವು. ಈಗ ಕಾರ್ಖಾನೆಯ ಕಾರ್ಯಾಚರಣೆಯಿಂದ ಅವುಗಳು ಕುಟುಂಬ ಸಹಿತ ನಾಪತ್ತೆಯಾಗಿ ವರ್ಷಗಳೇ ಕಳೆದಿವೆ.
ಪ್ರಕಾಶ್ ಸ್ಪಾಂಜ್ ಐರನ್ ಕಾರ್ಖಾನೆಯಿಂದ ನೇರವಾಗಿ ಹಾನಿಗೊಳಗಾಗಿರುವ 8-10 ಹಳ್ಳಿಗಳ ಒಟ್ಟು ರೈತರ ಕೃಷೀ ಭೂಮಿ ಬರೋಬ್ಬರಿ ಸಾವಿರ ಎಕೆರೆಗೂ ಹೆಚ್ಚು. ಕೃಷಿಯ ಜೊತೆ ಜಾನುವಾರುಗಳು ತಿನ್ನುವ ಮೇವೂ ಸಹ ವಿಷಯುಕ್ತವಾಗಿದೆ. ಇತ್ತೀಚೆಗಷ್ಟೆ ಕಾರ್ಖಾನೆಯ ಅನುಪಯುಕ್ತ ವಿಷವುಂಡು ಸುಮಾರು 80 ಕುರಿಗಳು ಸತ್ತಿವೆ.
ಅರಣ್ಯರೋದನವಾದ ರೈತರ ಅಳಲು – ದಿಕ್ಕೆಟ್ಟಿದೆ ನೇಗಿಲಯೋಗಿಯ ನೆಮ್ಮದಿಯ ಬದುಕು:
ಅಷ್ಟಕ್ಕೂ ಈ ಪ್ರಕಾಶ್ ಸ್ಪಾಂಜ್ ಐರನ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಿಂದ ರೈತರಿಗೆ, ಪರಿಸರಕ್ಕೆ ಆಗುತ್ತಿರುವ ತೊಂದರೆಯೇನು ಅನ್ನುವುದನ್ನು ಒಂದೊಂದಾಗಿ ನೋಡೋಣ ಬನ್ನಿ.. ಈ ಕಾರ್ಖಾನೆಯಿಂದ ನಿತ್ಯವೂ ಹೊರಸೂಸುವ ದೂಳು, ಹೊಗೆ ವಿಷವಾಯು ನೇರವಾಗಿ ರೈತರ ಬದುಕಿನ ಮೂಲ, ಕೃಷಿ ಭೂಮಿಗೆ ಹಾಗೂ ರೈತಾಪಿ ಕುಟುಂಬಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.
ಮೊದಲು ಈ ಭಾಗದಲ್ಲಿ ಹತ್ತಿ, ಸೂರ್ಯಕಾಂತಿ ಮತ್ತು ಜೋಳವನ್ನು ಸಮೃದ್ಧವಾಗಿ ಬೆಳೆಯಲಾಗುತ್ತಿತ್ತು. ಆದರೆ ಈ ಫ್ಯಾಕ್ಟರಿಯ ಕಾರಣದಿಂದ ಆ ಬೆಳೆಗಳ ವ್ಯವಸಾಯವನ್ನೇ ನಿಲ್ಲಿಸಿಬಿಟ್ಟಿದ್ದಾರೆ ರೈತರು. ಸದ್ಯ ಕಡಲೆ, ಶೇಂಗಾ ಮತ್ತು ಈರುಳ್ಳಿ ಬೆಳೆಯುತ್ತಾರೆ. ಪ್ರತಿ ದಿನ ಕಾರ್ಖಾನೆಯಿಂದ ಬಿಡುಗಡೆಯಾಗುವ ರಾಶಿರಾಶಿ ಹೊಗೆ ಮತ್ತು ಧೂಳಿನ ಕಣಗಳು ರೈತರ ಬೆಳೆಗಳ ಮೇಲೆ ಕೂರುತ್ತದೆ.
ಹೀಗಾಗಿ ಸ್ವಾಭಾವಿಕ ಪರಾಗಸ್ಪರ್ಷ ನಡೆಯದೇ ಬೆಳೆಯ ಇಳುವರಿ ಕುಂಟಿತಗೊಳ್ಳುತ್ತಿದೆ. ಹಿಂದೆ ಬೆಳೆಯುತ್ತಿದ್ದ ಅರ್ಧದಷ್ಟು ಉತ್ಪನ್ನವೂ ಕೈಸೇರುತ್ತಿಲ್ಲ. ಸಾಲ ಸೋಲ ಮಾಡಿ ಬೀಜ, ಗೊಬ್ಬರ ಹಾಕಿ ವ್ಯವಸಾಯ ಮಾಡುವ ನೇಗಿಲಯೋಗಿ ಅಂತಿಮವಾಗಿ ಬೆಳೆ ಬಂದಾಗ ಹತಾಶೆಯಿಂದ ಕಣ್ಣೀರಿಡುತ್ತಾನೆ.
ಇದಕ್ಕೊಂದು ಸರಳ ಉದಾಹರಣೆಯೇ ಕಾಪರಹಳ್ಳಿ ಮತ್ತು ಜಡೇಕುಂಟೆ ಗ್ರಾಮದ ರೈತರ ನೂರಾರು ಎಕರೆಯಲ್ಲಿ ಬೆಳೆದ ಈರುಳ್ಳಿ ಬೆಳೆ ನಾಶ. ಫ್ಯಾಕ್ಟರಿಯ ವಿಷವಾಯು ಧೂಳಿನ ಕಾರಣಕ್ಕೆ ಟನ್ ಗಟ್ಟಲೇ ಈರುಳ್ಳಿ ಕೊಳೆತು ನಾಶವಾಗಿದೆ. ರೈತರು ತಮ್ಮೆಲ್ಲಾ ಒಡಲ ಸಂಕಟ ಅದುಮಿಟ್ಟುಕೊಂಡು ಅಷ್ಟೂ ಈರುಳ್ಳಿ ಬೆಳೆಯನ್ನು ಗುಂಡಿ ತೋಡಿ ಹೂತುಹಾಕಿದ್ದಾರೆ.
ಎತ್ತ ಸತ್ತರು ರೈತಪರ ಕಾಳಜಿಯ ಜನನಾಯಕರು? ಹೊದ್ದು ಮಲಗಿದ್ದಾರಾ ಅಧಿಕಾರಿಗಳು?:
ಹಿರಿಯೂರು ಮತ್ತು ಚಳ್ಳಕೆರೆಗಳ ಮಧ್ಯೆ ರಾಷ್ಟ್ರೀಯ ಹೆದ್ದಾರಿ 150ರಲ್ಲೇ ಇರುವ ಈ ಪ್ರಕಾಶ್ ಸ್ಪಾಂಜ್ ಐರನ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯನ್ನು ಇಲ್ಲಿ ಸಮೃದ್ಧ ವಿಶಾಲ ನೀರಾವರಿ ಕೃಷಿ ಭೂಮಿಯಲ್ಲಿ ಸ್ಥಾಪಿಸಲು ಅವಕಾಶ ಕೊಟ್ಟಿದ್ದೇ ಮೊದಲ ತಪ್ಪು. ಇದಕ್ಕೆ ಅಂದಿನ ಸರ್ಕಾರ ಹಾಗೂ ನಿರ್ಲಜ್ಜ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೇರ ಹೊಣೆ. ಈ ಕಾರ್ಖಾನೆ ಶುರುವಾದಾಗಿನಿಂದ ಹೆಗ್ಗೆರೆ, ಕಾಪರಹಳ್ಳಿ, ಜಡೆಕುಂಟೆ, ಹುಲಿಕುಂಟೆ, ಕಂದಿಕೆರೆ, ಗೊಲ್ಲಹಳ್ಳಿ ಮುಂತಾದ ಗ್ರಾಮಗಳ ರೈತಾಪಿ ಜನರ ಬದುಕು ನಿತ್ಯ ನರಕವಾಗಿದೆ.
ಈ ಕಾರ್ಖಾನೆಯ ಮಾಲೀಕರು ದುಡ್ಡಿನ ಧಣಿಗಳು ತಮ್ಮ ಹಣ, ಅಧಿಕಾರ ಮತ್ತು ಪ್ರಭಾವಗಳನ್ನೆಲ್ಲಾ ಬಳಸಿ ರೈತರನ್ನು ಇನ್ನಿಲ್ಲದ ರೀತಿಯಲ್ಲಿ ಹಿಂಸಿಸುತ್ತಿದ್ದಾರೆ. ಮಳೆಗಾಲದಲ್ಲಿ ರೈತರು ನೀರು ಶೇಖರಿಸಲು ಮತ್ತು ಅಂತರ್ಜಲ ವೃದ್ಧಿಗೆ ಎಂದು ಕಟ್ಟಿಕೊಂಡಿದ್ದ ಸಣ್ಣ ಸಣ್ಣ ಬದುಗಳನ್ನು, ವಡ್ಡುಗಳನ್ನು, ಚೆಕ್ ಡ್ಯಾಮ್, ಕೃಷಿ ಹೊಂಡಗಳನ್ನೆಲ್ಲಾ ಕಾರ್ಖಾನೆಯವರು ಒಡೆದು ಹಾಕಿದ್ದಾರೆ.
ಈಗ ಮಳೆಗಾಲದಲ್ಲಿ ನುಗ್ಗಿಬರುವ ಪ್ರವಾಹ ನೇರವಾಗಿ ರೈತರ ಕೃಷಿ ಭೂಮಿಗೆ ನುಗ್ಗಿ ಮಣ್ಣಿನ ಸವಕಳಿಗೆ ಕಾರಣವಾಗುತ್ತಿದೆ. ಜೊತೆಗೆ ಅಂತರ್ಜಲದ ಕೊರತೆ ಎದುರಾಗಿದ್ದು ಸುತ್ತಮುತ್ತಲಿನ ಕೆರೆ, ತೋಡು, ಹೊಂಡ, ಬಾವಿಗಳ ನೀರು ಬತ್ತಿ ಹೋಗುತ್ತಿದೆ. ರೈತರ ಕೃಷಿ ಭೂಮಿಯಲ್ಲಿ ರಾಶಿ ರಾಶಿ ಮರಳು ತುಂಬಿಕೊಂಡಿದೆ. ಕಾರ್ಖಾನೆಯ ಕಿರುಕುಳ ಇಷ್ಟಕ್ಕೆ ನಿಲ್ಲುವುದಿಲ್ಲ. ರೈತರ ಕೃಷಿ ಭೂಮಿಯ ಮೇಲೆ ಹೈಪವರ್ ವಿದ್ಯುತ್ ಲೈನ್ ಎಳೆಯಲಾಗಿದೆ. ಪ್ರಶ್ನಿಸಿದವರಿಗೆ ಹಣದ ಆಮೀಷ ಒಡ್ಡಿ ಸುಮ್ಮನಾಗಿಸಲಾಗುತ್ತದೆ. ಸುಮ್ಮನಿದ್ದವರಿಗೆ ಬಿಡಿಗಾಸು ಬಿಸಾಕಿ ಬಾಯಿ ಮುಚ್ಚಿಸಲಾಗುತ್ತದೆ.
ಎಲ್ಲದಕ್ಕಿಂತ ಅಪಾಯಕಾರಿ ಸಂಗತಿ ಎಂದರೆ ಈ ಭಾಗದ ಗ್ರಾಮಗಳ ಸಣ್ಣ ಪುಟ್ಟ ಮಕ್ಕಳು ಅಸ್ತಮಾದಂತಹ ಕಾಯಿಲೆಯ ಭೀತಿಯಲ್ಲಿವೆ. ಇವರಲ್ಲಿ ಶ್ವಾಸಕೋಶದ ಗಂಭೀರ ಸಮಸ್ಯೆ ತಲೆದೂರುತ್ತಿದೆ. ಉಸಿರಾಡುವ ಗಾಳಿಯಲ್ಲಿ ಧೂಳಿನ ಕಣಗಳು ದೇಹದ ಒಳಸೇರುತ್ತಿವೆ. ಭವಿಷ್ಯದಲ್ಲಿ ಇದರ ಪರಿಣಾಮವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಇಷ್ಟೆಲ್ಲಾ ತೊಂದರೆ ತಾಪತ್ರಗಳಾದರೂ ರೈತರು ಅವುಡುಗಚ್ಚಿ ಸಹಿಸಿಕೊಂಡು ಛಲ ಬಿಡದೆ ಉತ್ತನೆ ಬಿತ್ತನೆ ಮಾಡುತ್ತಲೇ ಇದ್ದಾರೆ.
ಕೆಲವರು ವ್ಯವಸಾಯ ವೃತ್ತಿಯನ್ನೇ ಬಿಟ್ಟಿದ್ದಾರೆ. ಕಾರ್ಖಾನೆಯಾಗುವ ಮೊದಲು ನೂರಾರು ಮಂದಿ ಸ್ಥಳೀಯರಿಗೆ ಉದ್ಯೋಗ ನೀಡುತ್ತೇನೆಂದು ಭರವಸೆ ನೀಡಿದ್ದ ಧಣಿ ಆ ಮಾತನ್ನೂ ನೆಡೆಸಿಕೊಟ್ಟಿಲ್ಲ. ಲೆಕ್ಕ ಹಾಕಿದರೆ 50ಕ್ಕಿಂತ ಕಡಿಮೆ ಜನರಿಗೆ ಕೆಳ ಮಟ್ಟದ ಸಣ್ಣ ಸಂಬಳದ ಉದ್ಯೋಗ ಲಭಿಸಿದೆಯಷ್ಟೆ. ತಮ್ಮದೇ ಜಮೀನನ್ನು ಧಣಿಗಳಿಗೆ ಬಿಟ್ಟುಕೊಟ್ಟು ಅಲ್ಲಿ ಕೂಲಿಯಾಳುಗಳಾಗಿ ದುಡಿಯುತ್ತಿದ್ದಾರೆ ಈ ರೈತರು.
ಸದ್ಯ ಕಾರ್ಖಾನೆಯಲ್ಲಿ ಕೆಲಸ ಮಾಡುವ ಬಹುಪಾಲು ಜನ ಉತ್ತರ ಭಾರತೀಯರು. ಇನ್ನು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿಯಾದರೂ ಸ್ಥಳೀಯ ಜನರಿಗೆ ರೈತರಿಗೆ ಕಾರ್ಖಾನೆ ನೆರವು ನೀಡಿದ್ದರೇ ರೈತರು ತಮ್ಮ ತಾಪತ್ರಯಗಳನ್ನೆಲ್ಲಾ ಮರೆತು ಸುಮ್ಮನಾಗಿಬಿಡುತ್ತಿದ್ದರು. ಆದರೆ ಈ ಸುತ್ತಮುತ್ತಲಿನ ಬಾಧಿತ ಪ್ರದೇಶಗಳ ಕಲ್ಯಾಣಕ್ಕಾಗಿ ಕಾರ್ಖಾನೆಯ ಆಡಳಿತ ನಯಾಪೈಸೆ ಖರ್ಚು ಮಾಡಿಲ್ಲ. ಇಲ್ಲೊಂದು ಉತ್ತಮವಾದ ಆಸ್ಪತ್ರೆ ಕಟ್ಟಿಕೊಟ್ಟಿದ್ದರೂ ಸಾಕಿತ್ತು. ಈಗಲೂ ಈ ರೈತರು ತಮ್ಮ ತುರ್ತು ಅನಾರೋಗ್ಯ ಸಮಸ್ಯೆಗಳಾದರೇ ದೂರದ ಚಳ್ಳಕೆರೆ ಅಥವಾ ಹಿರಿಯೂರಿಗೆ ಹೋಗಬೇಕು.
ಜನನಾಯಕರೇ ಹೊಟ್ಟೆಗೆ ಅನ್ನ ತಿನ್ನುವಿರಾದರೇ ಈ ಅನ್ಯಾಯ ನೋಡಿ – ನಿಮಗೆ ಆತ್ಮ ಸಾಕ್ಷಿ ಇದ್ದರೇ ಈ ರೈತರ ಪರ ನಿಲ್ಲಿ!:
ಒಂದು ಕಾರ್ಖಾನೆಯಿಂದ ಕೃಷಿ ಮತ್ತು ಪರಿಸರದ ಮೇಲೆ ಏನೆಲ್ಲಾ ವ್ಯತಿರಿಕ್ತ ಪರಿಣಾಮಗಳುಂಟಾಗಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ ಈ ಕಾರ್ಖಾನೆ.. ಬಂಡವಾಳಶಾಹಿ ವ್ಯವಸ್ಥೆ ತನ್ನ ಪ್ರಭಾವ ಬಳಸಿ ಹೇಗೆ ರೈತಾಪಿ ವರ್ಗವನ್ನು ಕೊಲ್ಲಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ ಕಾರ್ಖಾನೆಯ ಮ್ಯಾನೇಜಿಂಗ್ ಡೈರೆಕ್ಟರ್ ಪ್ರವೀಣ್ ಚಂದ್ರ ರಾಮಮೂರ್ತಿ.
ರೈತ ಮತ್ತು ಸೈನಿಕ ಈ ದೇಶದ ಆಸ್ತಿ, ಹೆಮ್ಮೆ, ಅಭಿಮಾನ ಮತ್ತು ಎಮೋಷನ್ಸ್. ಈ ಇಬ್ಬರನ್ನೂ ನಾವು ಎತ್ತರದ ಸ್ತಾನದಲ್ಲಿಟ್ಟು ಗೌರವಿಸಿ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇವೆ.. ಆದರೆ ಪದೇ ಪದೇ ಅನ್ಯಾಯಕ್ಕೊಳಗಾಗುತ್ತಿದ್ದಾನೆ ನಮ್ಮ ಸ್ವಾಭಿಮಾನಿ ರೈತ. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳೇ, ರೈತನ ಹೆಸರಲ್ಲಿ ಅಧಿಕಾರಕ್ಕೆ ಬಂದ ಜನನಾಯಕರೇ, ರೈತನ ಧ್ವನಿಯಾಗಬೇಕಿರುವ ಹಸಿರು ಶಾಲಿನ ರೈತನಾಯಕರೇ, ನಿಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೇ, ನೀವು ಹೊಟ್ಟೆಗೆ ಅನ್ನವನ್ನೇ ತಿನ್ನುತ್ತೀರಾದರೇ ಹೆಗ್ಗೆರೆ ಗ್ರಾಮದ ಪ್ರಕಾಶ್ ಸ್ಪಾಂಜ್ ಐರನ್ ಪ್ರೈವೇಟ್ ಲಿಮಿಟೆಡ್ ಕಾರ್ಪೊರೇಟ್ ದೌರ್ಜನ್ಯವನ್ನು ಪ್ರಶ್ನಿಸಿ.
ರೈತರ ಅಳಲು, ಅಹವಾಲುಗಳಿಗೆ ಕಿವಿಕೊಡಿ. ಮಾಲೀಕ ಆರ್. ಪ್ರವೀಣ್ ಚಂದ್ರರ ಪ್ರಭಾವಕ್ಕೆ ತುತ್ತಾಗಬೇಡಿ. ಅವರು ಕೊಡುವ ಹಣಕ್ಕಿಂತ ದೊಡ್ಡದು ರೈತರ ಬದುಕು ಮತ್ತು ಮುಂದಿನ ಪೀಳಿಗೆಯ ಮಕ್ಕಳ ಜೀವ. ಈಗಲಾದರೂ ಎಚ್ಚೆತ್ತುಕೊಳ್ಳಿ ಅನ್ನದಾನ ಹೆಗಲು ತಬ್ಬಿ ಆಸರೆ ನೀಡಿ.
ಯಾರಿದು ಪ್ರವೀಣ್ ಚಂದ್ರ?:
ನಿಮಗೆ 2012ರಲ್ಲಿ ಸನ್ಮಾನ್ಯ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಅಸ್ಥಿತ್ವದಲ್ಲಿದ್ದಾಗ ಪ್ರೇರಣಾ ಟ್ರಸ್ಟ್ ಗೆ ಚೆಕ್ ಮೂಲಕ ಲಂಚ ನೀಡಲಾದ ಪ್ರಕರಣ ನೆನಪಿರಬಹುದು. ಆಗ ಇಷ್ಯೂ ಆದ 6 ಕೋಟಿ ರೂಪಾಯಿಗಳ ಚೆಕ್ ಇದೇ ಪ್ರವೀಣ್ ಚಂದ್ರರದ್ದು. ಅಕ್ಟೋಬರ್ 2010ರಲ್ಲಿ ಪ್ರವೀಣ್ ಚಂದ್ರರಿಗೆ 330 ಎಕರೆ ಜಮೀನನ್ನು ಮೈನಿಂಗ್ ಲೀಸ್ ಮಾಡಿಕೊಡಲು ಯಡಿಯೂರಪ್ಪ ಸರ್ಕಾರ 6 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದುಕೊಂಡಿದೆ ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್ ಹಿರೇಮಠ್ ಆರೋಪ ಮಾಡಿದ್ದರು.
ಯಡಿಯೂರಪ್ಪ ಕುಟುಂಬದ ಒಡೆತನದ ಸಂಸ್ಥೆಗಳಿಗಳಿಗೆ ಹಣ ಪಾವಿತಿಯಾಗಿದೆ ಎನ್ನುವುದು ಹಿರೇಮಠ್ ಅವರ ಆಪಾದನೆಯಾಗಿತ್ತು. ಈ ರಾಮಮೂರ್ತಿ ಪ್ರವೀಣ್ ಚಂದ್ರರವರು ಪ್ರಕಾಶ್ ಸ್ಪಾಂಜ್ ಐರನ್ & ಪವರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರು ಮಾತ್ರವಲ್ಲ ಜೆ.ಎಸ್.ಡಬ್ಲ್ಯೂ ಅಥವಾ ಜಿಂದಾಲ್ ನ ಅಧಿಕೃತ ಗುತ್ತಿಗೆದಾರರೂ ಹೌದು. ಇವರ ಒಡೆತನದಲ್ಲಿ ಇ. ರಾಮಮೂರ್ತಿ ಮಿನರಲ್ಸ್ ಎಂಡ್ ಮೆಟಲ್ಸ್ ಪ್ರೈವೇಟ್ ಲಿಮಿಟೆಡ್, ಕೋಡ್ ಲ್ಯಾಂಡ್ ಇನ್ಫೋ ಸೆಲ್ಯೂಷನ್ ಎನ್ನುವ ಸಾಫ್ಟ್ ವೇರ್ ಉದ್ಯಮ, ಬೆಸ್ಟ್ ಮೈನಿಂಗ್ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್, ಗದ್ರಿಗುಡ್ಡ ಮೈನಿಂಗ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್, ಇ. ರಾಮಮೂರ್ತಿ ಪವರ್ ಪ್ರೈವೇಟ್ ಲಿಮಿಟೆಡ್, ಕೆನರಾ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್, ಬೆನಕಾ ಮಿನರಲ್ಸ್ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್, ಚಿತ್ರದುರ್ಗದ ಸಿರಿಗೆರಿಯ ಸಮೀಪ ಜಾನ್ ಮೈನ್ಸ್ ಅಧಿಕೃತ ಸಂಸ್ಥೆಗಳಿವೆ.
ಪ್ರವೀಣ್ ಚಂದ್ರ ಸರಿಯಾಗಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಿಲ್ಲ ಮತ್ತು ಸರ್ಕಾರಕ್ಕೆ ಸಮರ್ಪಕ ರಾಯಲ್ಟಿ ಕಟ್ಟುತ್ತಿಲ್ಲ ಎಂದು 2019ರಲ್ಲಿ ಹೈಕೋರ್ಟ್ ನಲ್ಲಿ ಚಿತ್ರದುರ್ಗದ ಮೈನಿಂಗ್ ಮತ್ತು ಜಿಯೋಲಜಿ ಡಿಪಾರ್ಟ್ ಮೆಂಟ್ ನಿಂದ ಹಾಕಲ್ಪಟ್ಟ ದಾವೆಯ ವಿಚಾರಣೆ ಮುಗಿದು ತೀರ್ಪು ಹೊರಬಿದ್ದಿತ್ತು. ದುರದೃಷ್ಟವಶಾತ್ ಸರಿಯಾದ ದಾಖಲೆಗಳಿಲ್ಲದೇ ಆ ಪ್ರಕರಣದಲ್ಲಿ ಪ್ರವೀಣ್ ಚಂದ್ರರ ಪರ ತೀರ್ಪು ಪ್ರಕಟವಾಗಿತ್ತು. ಸ್ಥಳೀಯ ರೈತರು ಹೇಳುವ ಮಾತುಗಳನ್ನು ಕೇಳಿದಾಗ ಪ್ರವೀಣ್ ಚಂದ್ರ ಸರ್ಕಾರಕ್ಕೆ ರಾಯಲ್ಟಿ ಕಟ್ಟುವ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿರಬಹುದಾ ಎನ್ನುವ ಅನುಮಾನಗಳು ಕಾಡುತ್ತವೆ.
-ವಿಭಾ (ವಿಶ್ವಾಸ್ ಭಾರದ್ವಾಜ್)