ಹಾವೇರಿ: ಮುಡಾ ಸಂಕಷ್ಟದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಅವರು ಪ್ರಕರಣದಿಂದ ಮುಕ್ತರಾಗಿ ಹೊರ ಬರಲಿ ಎಂದು ದರ್ಗಾದಲ್ಲಿ ಬೆಂಬಲಿಗರು ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ನೇತೃತ್ವದಲ್ಲಿ ನೂರಾರು ಬೆಂಬಲಿಗರು ಹಾವೇರಿ (Haveri) ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ವಿರೋಧಿಗಳು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ (BJP) ಹಾಗೂ ಜೆಡಿಎಸ್ (JDS) ನಾಯಕರು ಒಂದಾಗಿ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಾರ್ಥನೆಗೂ ಮುನ್ನ ಅಜ್ಜಂಫೀರ್ ಖಾದ್ರಿ ಪಾದಯಾತ್ರೆ ನಡೆಸಿದರು. ಈ ವೇಳೆ ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು. ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಿಂದ ಶಿಗ್ಗಾವಿ ಪಟ್ಟಣದವರೆಗೆ ಪಾದಯಾತ್ರೆ ನಡೆಯಿತು.
ಸಿಎಂ ಭ್ರಷ್ಟಾಚಾರ ರಹಿತ ಸ್ವಚ್ಛ ಆಡಳಿತ ನಡೆಸಿದ್ದಾರೆ. ಅವರು ಸಿಎಂ ಹುದ್ದೆಯಲ್ಲಿ ಇರುವುದನ್ನು ಸಹಿಸಲು ಆಗುತ್ತಿಲ್ಲ. ಹೀಗಾಗಿ ವಿರೋಧಿಗಳು ಇಂತಹ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದರು.