ಬೆಂಗಳೂರು: ಕೊರೊನಾ ಮಹಾಸ್ಫೋಟ ಮುಂದುವರೆದ ಬೆನ್ನಲ್ಲೇ ಶಾಲಾ-ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರ ತೆರೆಮರೆಯ ಕಸರತ್ತು ನಡೆಸಿದೆ ಎಂಬ ಊಹಾಪೋಹಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ.
ಕೊರೊನಾ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಶಾಲೆಗಳನ್ನು ಪ್ರಾರಂಭಿಸುವುದರ ಕುರಿತು ಪರ ಮತ್ತು ವಿರೋಧದ ಚರ್ಚೆಗಳು ಆಗುತ್ತಿವೆ. ಈ ಬಗ್ಗೆ ಮಾಧ್ಯಮಗಳು ಸಹ ಅಭಿಯಾನಗಳನ್ನು ಪ್ರಾರಂಭಿಸಿವೆ. ಜತೆಗೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರೂ ಸಹ ತಮ್ಮ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ.
ಮಕ್ಕಳ ಆರೋಗ್ಯ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಶಾಲೆಗಳನ್ನು ಪ್ರಾರಂಭಿಸುವ ಮುನ್ನ ಎಲ್ಲ ಪಕ್ಷಗಳ ಮುಖಂಡರು, ತಜ್ಞರು, ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದು ಸಾಧಕ ಭಾದಕಗಳನ್ನು ಚರ್ಚಿಸಿ ಶಾಲೆಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು.
ಅಲ್ಲಿಯವರೆಗೆ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಉಂಟಾಗಿರುವ ಯಾವುದೇ ಊಹಾಪೋಹ ಹಾಗೂ ವದಂತಿಗಳಿಗೆ ಕಿವಿಗೊಡಬಾರದು ಎಂದು ಪೋಷಕರಿಗೆ ಮನವಿ ಮಾಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ವಿದ್ಯಾಗಮ ಯೋಜನೆಯಡಿ ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರಿಂದ ಕಲಬುರಗಿಯ ನಾಲ್ವರು ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅಲ್ಲದೆ, ಸೆಪ್ಟೆಂಬರ್ ಅಂತ್ಯಕ್ಕೆ ಕೊರೊನಾ ಹಾಗೂ ವಿದ್ಯಾಗಮ ಕಾರ್ಯಕ್ರಮದ ನಂತರ ರಾಜ್ಯದಲ್ಲಿ 110ಕ್ಕೂ ಹೆಚ್ಚು ಶಿಕ್ಷಕರು ಹೆಮ್ಮಾರಿ ಕೊರೊನಾಗೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯಬೇಕೇ ಎಂದು ಪೋಷಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದು, ಯಾವುದೇ ಕಾರಣಕ್ಕೂ ಮಕ್ಕಳನ್ನು ಶಾಲೆಗಳಿಗೆ ಕಳಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಜತೆಗೆ ಸಿದ್ದರಾಮಯ್ಯ, ಹೆಚ್.ಡಿ ಕುಮಾರಸ್ವಾಮಿ, ಸಂಸದೆ ಶೋಭಾ ಕರಂದ್ಲಾಜೆ ಕೂಡ ಈ ವರ್ಷ ಶಾಲೆರಹಿತ ಹಾಗೂ ಪರೀಕ್ಷೆ ರಹಿತ ವರ್ಷ ಎಂದು ಘೋಷಣೆ ಮಾಡುವಂತೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಷಕರಲ್ಲಿ ಉಂಟಾಗಿರುವ ಗೊಂದಲ ದೂರಮಾಡಲು ಖುದ್ದು ಮುಖ್ಯಮಮಂತ್ರಿಗಳೇ ಸ್ಪಷ್ಟನೆ ನೀಡಿದ್ದಾರೆ.