ನವದೆಹಲಿ : ಭಾರತಕ್ಕೆ ಮೇಡ್ ಇನ್ ಇಂಡಿಯಾಗಿಂತ ಮೇಡ್ ಇನ್ ಗ್ಲೋಬಲ್ ಅನಿವಾರ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) 125 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಡೆದ ವಾರ್ಷಿಕ ಸಭೆಯನ್ನು ಉದ್ದೇಶಿಸಿ ವಿಡಿಯೋ ಸಂವಾದದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಆತ್ಮನಿರ್ಭರ ಭಾರತ ಕಟ್ಟಲು ಸರ್ಕಾರ ಯಾವಾಗಲೂ ನಿಮ್ಮ ಜೊತೆಯಲ್ಲಿಯೇ ಇರುತ್ತದೆ. ದೇಶದ ತಾಕತ್ತಿನ ಮೇಲೆ ನಂಬಿಕೆಯಿದೆ. ನಾನು ಭಾರತದ ತಂತ್ರಜ್ಞಾನ ಮತ್ತು ಆವಿಷ್ಕಾರವನ್ನು ನಂಬುತ್ತೇನೆ. ನಾನು ರೈತರು, ಸಣ್ಣ ಕೈಗಾರಿಕೆಗಳು ಮತ್ತು ಉದ್ಯಮಿಗಳನ್ನು ನಂಬುತ್ತೇನೆ. ಭಾರತವು ಮರಳಿ ತನ್ನ ಬೆಳವಣಿಗೆ, ಅಭಿವೃದ್ಧಿಯನ್ನು ಸಾಧಿಸಲಿದೆ ಎಂಬುದನ್ನು ನಾನು ನಂಬುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಕೊರೊನಾ ವಿರುದ್ಧ ಆರ್ಥಿಕತೆಯನ್ನು ಪುನಃ ಬಲಪಡಿಸುವುದು ನಮ್ಮ ಮೊದಲ ಆದ್ಯತೆಗಳಲ್ಲಿ ಒಂದಾಗಿದೆ. ಇದಕ್ಕಾಗಿ ಸರ್ಕಾರ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಂಡಿದೆ. ನಾವು ದೀರ್ಘಾವಧಿಯಲ್ಲಿ ದೇಶಕ್ಕೆ ಸಹಾಯ ಮಾಡುವ ನಿರ್ಧಾರಗಳನ್ನು ಸಹ ತೆಗೆದುಕೊಂಡಿದ್ದೇವೆ. ನಾವು ಖಂಡಿತವಾಗಿಯೂ ನಮ್ಮ ಬೆಳವಣಿಗೆಯನ್ನು ಮರಳಿ ಪಡೆಯುತ್ತೇವೆ ಎಂದು ವಿಶ್ವಾಸದಿಂದ ಹೇಳುತ್ತೇನೆ. ಕೋವಿಡ್ -19ರ ವಿರುದ್ಧದ ಹೋರಾಟದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಏಕೆಂದರೆ ನಾವು ಸಮಯಕ್ಕೆ ಸರಿಯಾದ ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಮೋದಿ ಹೇಳಿದ 5 ಐ ಸೂತ್ರಗಳೇನು?
ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ಇಂಟೆಂಟ್, ಇನ್ ಕ್ಲೂಷನ್, ಇನ್ವೆಸ್ಟ್ ಮೆಂಟ್, ಇನ್ ಫ್ರಾಸ್ಟ್ರಕ್ಚರ್, ಇನ್ನೋವೇಷನ್ ಸೇರಿದ 5-ಐ ಸೂತ್ರವನ್ನು ಪ್ರಧಾನಿ ಮೋದಿ ಮುಂದಿಟ್ಟಿದ್ದಾರೆ. ಈಗ ವಿಶ್ವ ನಂಬಿಕಸ್ಥ ಸ್ನೇಹಿತನಿಗಾಗಿ ಹುಡುಕಾಡುತ್ತಿದ್ದು, ಈ ಸ್ನೇಹಿತನಾಗುವತ್ತ ದೇಶ ಮುಂದುವರೆದಿದೆ. ಈಗಾಗಲೇ 150 ರಾಷ್ಟ್ರಗಳಿಗೆ ಸಂಕಷ್ಟದ ಸ್ಥಿತಿಯಲ್ಲಿ ಸಹಾಯ ಮಾಡಿದೆ ಎಂದು ಮೋದಿ ತಿಳಿಸಿದ್ದಾರೆ








