ವಿಶ್ವ ಯೋಗ ದಿನ ಹಿನ್ನಲೆಯಲ್ಲಿ ದೇಶವಾಸಿಗಳಿಗೆ ಪ್ರಧಾನಿ ಮೋದಿ ಮನವಿ
ಹೊಸದಿಲ್ಲಿ, ಜೂನ್ 19: ಜೂನ್ 21 ಅಂತರಾಷ್ಟ್ರೀಯ ಯೋಗ ದಿನ. ಈ ಬಾರಿ ವಿಶ್ವ ಯೋಗ ದಿನ ಕೊರೊನಾ ವೈರಸ್ ಸೋಂಕಿನ ಭೀತಿಯ ಮಧ್ಯೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಲ್ಲಿ ಮನವಿಯೊಂದನ್ನು ಮಾಡಿದ್ದಾರೆ.
ಜೂನ್ 21 ಭಾನುವಾರ ಅಂತರಾಷ್ಟ್ರೀಯ ಯೋಗ ದಿನದ ಹಿನ್ನಲೆಯಲ್ಲಿ ದೇಶದ ಜನರಿಗೆ ಎಲ್ಲರೂ ಮನೆಯಿಂದಲೇ ಯೋಗ ದಿನವನ್ನು ಆಚರಣೆ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ.
ವಿಶ್ವ ಸಂಸ್ಥೆ ಯೋಗದ ಮಹತ್ವವನ್ನು ಮನಗೊಂಡು ಇಡೀ ವಿಶ್ವಕ್ಕೆ ಪ್ರತೀ ವರ್ಷ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಣೆ ಮಾಡಲು ಕರೆಕೊಟ್ಟಿತ್ತು. ವಿಶ್ವದಾದ್ಯಂತ ಜೂನ್ 21ರಂದು ಪ್ರತಿ ವರ್ಷ ಯೋಗ ದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಕೂಡ ವಿಶ್ವ ಯೋಗ ದಿನದ ಅಂಗವಾಗಿ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರೊಂದಿಗೆ ತಾವು ಯೋಗ ಮಾಡುತ್ತಿದ್ದರು.
ಆದರೆ ಈ ಬಾರಿ ವಿಶ್ವದಾದ್ಯಂತ ಕೊರೊನಾ ವೈರಸ್ ನ ರುದ್ರ ನರ್ತನ ಜೋರಾಗಿದ್ದು, ಎಲ್ಲೆಡೆಯೂ ಜನರ ಮಾರಣಹೋಮವೇ ನಡೆಯುತ್ತಿದೆ. ಕೊರೊನಾ ಸೋಂಕಿನಿಂದ ದೂರವಿರಲು ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆಯ ಹಿನ್ನಲೆಯಲ್ಲಿ ಈ ಬಾರಿ ಜನಸಂದಣಿ ಸೇರುವ ಕಾರ್ಯಕ್ರಮಗಳನ್ನು ಅಯೋಜಿಸುವಂತಿಲ್ಲ. ಹಾಗಾಗಿ ಈ ವರ್ಷದ ಜೂನ್ 21 ಭಾನುವಾರದಂದು ವಿಶ್ವ ಯೋಗ ದಿನದ ಅಂಗವಾಗಿ ಯಾವುದೇ ಕಾರ್ಯಕ್ರಮಗಳು ನಡೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ದೇಶವಾಸಿಗಳಿಗೆ ಪ್ರಧಾನಿ ಮೋದಿ ಜೂನ್ 21ರಂದು ಮನೆಯಿಂದಲೇ ಎಲ್ಲರೂ ಯೋಗ ಮಾಡಿ ಎಂದು ಮನವಿ ಮಾಡಿದ್ದಾರೆ.