ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ 6ನೇ ಪದಕ ಗೆದ್ದು ಕೊಟ್ಟ ಕುಸ್ತಿ ಪಟು ಅಮನ್ ಸೆಹ್ರಾವತ್ ಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.
ಪುರುಷರ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿರುವ ಅಮನ್ ಸೆಹ್ರಾವತ್ ಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಅಭಿನಂದಿಸಿ, ಹೆಮ್ಮೆ ಪಟ್ಟಿದ್ದಾರೆ. ಪ್ರಧಾನಿ ಮೋದಿ ಇಂದು ಕೇರಳದಲ್ಲಿ ವಯನಾಡಿಗೆ ಭೇಟಿ ನೀಡಿದ್ದರು. ಅಲ್ಲಿಂದಲೇ ಅಮನ್‌ಗೆ ಕರೆ ಮಾಡಿ ಹೃತ್ಪೂರ್ವಕ ಅಭಿನಂದನೆಗಳು ಅಮನ್, ನಿಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ. ನಿಮ್ಮ ಸಾಧನೆಯಿಂದ ಇಡೀ ದೇಶದ ಮನೆ ಮಾತಾಗಿದ್ದೀರಿ. ಛತ್ರಸಾಲ್ ಕ್ರೀಡಾಂಗಣವನ್ನು ತಮ್ಮ ಮನೆಯನ್ನಾಗಿ ಮಾಡಿಕೊಳ್ಳುವ ಕೆಲವೇ ಕೆಲವು ಆಟಗಾರರಿದ್ದಾರೆ. ಆ ಪೈಕಿ ನೀವು ಒಬ್ಬರು. ಕುಸ್ತಿಗೆ ನಿಮ್ಮನ್ನು ನೀವು ಮುಡಿಪಾಗಿಟ್ಟಿದ್ದೀರಿ. ನಿಮ್ಮ ಜೀವನವು ದೇಶವಾಸಿಗಳಿಗೆ ಸ್ಪೂರ್ತಿದಾಯಕವಾಗಿದೆ. ಭಾರತಕ್ಕೆ ಒಲಿಂಪಿಕ್ ಪದಕ ಗೆದ್ದ ಅತ್ಯಂತ ಕಿರಿಯ ಆಟಗಾರ ನೀವು. ನಿಮ್ಮ ಮುಂದೆ ಇನ್ನೂ ದೀರ್ಘ ಪ್ರಯಾಣವಿದೆ. ನೀವು ಖಂಡಿತವಾಗಿಯೂ ಈ ದೇಶದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತೀರಿ ಎಂಬ ವಿಶ್ವಾಸವಿದೆ ಎಂದು ಹಾಡಿ ಹೊಗಳಿದ್ದಾರೆ.
ಈ ಬಾರಿ ಚಿನ್ನದ ಪದಕವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ 2028 ರಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಖಂಡಿತವಾಗಿ ಚಿನ್ನ ತರುವುದಾಗಿ ಅಮನ್ ಭರವಸೆ ನೀಡಿದ್ದಾರೆ. ದೇಶವಾಸಿಗಳು ಚಿನ್ನದ ಪದಕವನ್ನು ನಿರೀಕ್ಷಿಸುತ್ತಿದ್ದರು. ಆದರೆ ನಾನು ಅದನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಅಮನ್ ಪ್ರತಿಕ್ರಿಯೆ ನೀಡಿದ್ದಾರೆ.