ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿಷಯದಲ್ಲಿ ಎಚ್ಚರಿಕೆಯಿಂದ ಇರುವಂತೆ ಕಿವಿ ಮಾತು ಹೇಳಿದ್ದಾರೆ.
ಉತ್ತರ ಪ್ರದೇಶದ ಆಲಿಘಡದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟ ನಿಮ್ಮ ಗಳಿಕೆ ಹಾಗೂ ಆಸ್ತಿಯ ಮೇಲೆ ಕಣ್ಣಿಟ್ಟಿದೆ. ಒಕ್ಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ, ಯಾರು ಎಷ್ಟು ಸಂಪಾದಿಸುತ್ತಾರೆ ಎಂಬುದನ್ನು ಸಮೀಕ್ಷೆ ಮಾಡುತ್ತೇವೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಹೀಗಾಗಿ ಅದು ನಿಮ್ಮ ಆಸ್ತಿಯ ಮೇಲೆ ಕಣ್ಣಿಟ್ಟಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ರಾಜಕುಮಾರ ಹೇಳಿದಂತೆ ಸರ್ಕಾರ ರಚಿಸಿದರೆ, ಯಾರು ಎಷ್ಟು ಸಂಪಾದಿಸುತ್ತಾರೆ. ಎಷ್ಟು ಆಸ್ತಿ ಹೊಂದಿದ್ದಾರೆ ಮತ್ತು ಎಷ್ಟು ಮನೆ ಹೊಂದಿದ್ದಾರೆ ಎಂದು ಸಮೀಕ್ಷೆ ನಡೆಸುತ್ತೇವೆ ಎಂದಿದ್ದಾರೆ. ಅಂದರೆ, ಸರ್ಕಾರವು ನಿಮ್ಮ ಆಸ್ತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಇದು ಮಾವೋವಾದಿ ಚಿಂತನೆ. ಇದು ಕಮ್ಯುನಿಸ್ಟರ ಚಿಂತನೆಯಾಗಿದೆ. ಇದನ್ನು ಜಾರಿಗೆ ತರಲು ಇಂಡಿಯಾ ಮೈತ್ರಿ ಬಯಸಿದೆ ಎಂದು ಕಿಡಿಕಾರಿದ್ದಾರೆ.
ಹಿಂದೆ ಹಜ್ ಗೂ ಲಂಚ ನೀಡಬೇಕಿತ್ತು. ಲಂಚದ ಮೊತ್ತ ಕೂಡ ಹೆಚ್ಚಾಗಿತ್ತು. ಹೀಗಾಗಿಯೇ ಪ್ರಭಾವಿ ವ್ಯಕ್ತಿಗಳು ಮಾತ್ರ ಹಜ್ ಗೆ ಹೋಗುತ್ತಿದ್ದರು. ಭಾರತದಲ್ಲಿನ ನಮ್ಮ ಮುಸ್ಲಿಂ ಸಹೋದರ ಸಹೋದರಿಯರಿಗೆ ಹಜ್ ಕೋಟಾ ಹೆಚ್ಚಿಸುವಂತೆ ನಾನು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಗೆ ವಿನಂತಿಸಿದ್ದೆ ಎಂದು ಹೇಳಿದ್ದಾರೆ.
ಭಾರತದ ಹಜ್ ಕೋಟಾವನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ ವೀಸಾ ನಿಯಮ ಸಹ ಸುಲಭಗೊಳಿಸಲಾಗಿದೆ. ಹೀಗಾಗಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.