ನವದೆಹಲಿ: ಆಯುರ್ವೇದ ಹಾಗೂ ಹೋಮಿಯೋಪತಿ ಚಿಕಿತ್ಸೆ ಪಡೆಯುವ ಮೂಲಕ ಬ್ರಿಟನ್ ನ ಪ್ರಿನ್ಸ್ ಚಾರ್ಲ್ಸ್ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಬಗ್ಗೆ ಖುದ್ದು ಆಯುಶ್ ಇಲಾಖೆಯ ರಾಜ್ಯ ಖಾತೆ ಸಚಿವ ಶ್ರೀಪಾದ್ ನಾಯ್ಕ್ ಅವರೇ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹೊತ್ತಲ್ಲಿ ಆಯುರ್ವೇದ ಚಿಕಿತ್ಸೆಯಿಂದ ಪ್ರಿನ್ಸ್ ಚಾರ್ಲ್ಸ್ ಗುಣಮುಖರಾದ ಸುದ್ದಿ ಹೊರ ಬಿದ್ದಿರೋದು ಹೊಸ ಆಶಾಭಾವನೆಯನ್ನ ಮೂಡಿಸಿದೆ. ಪ್ರಿನ್ಸ್ ಚಾರ್ಲ್ಸ್ ಗುಣಮುಖರಾಗಲು ನೆರವಾಗಿದ್ದು ಆಯುರ್ವೇದ ಔಷಧಿಗಳು. ಇದು ನಮ್ಮ ಪುರಾತನ ಚಿಕಿತ್ಸಾ ಪದ್ದತಿಗೆ ಮತ್ತಷ್ಟು ಬಲ ನೀಡಿದೆ ಮತ್ತು ಇದು ಪರಿಣಾಮಕಾರಿ ಚಿಕಿತ್ಸಾ ವಿಧಾನ ಅನ್ನೋದನ್ನ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದಿದ್ದಾರೆ.
ಇನ್ನು ಈಗಾಗಲೇ ನಾವು ಕೇಂದ್ರ ಸರ್ಕಾರಕ್ಕೆ, ಪರ್ಯಾಯ ಔಷಧಿಗಳನ್ನ ಬಳಸಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಅನುಮತಿ ಕೊಡಿ ಎಂದು ಮನವಿ ಮಾಡಿದ್ದೇವೆ. ಈ ವಿಧಾನಗಳು ಈ ಹಿಂದೆ ಯಶಸ್ವಿಯಾಗಿ ರೋಗವನ್ನ ನಿರ್ಮೂಲನೆ ಮಾಡಿರುವ ಉದಾಹರಣೆಗಳಿವೆ ಎಂದು ಶ್ರೀಪಾದ್ ನಾಯ್ಕ್ ಅವರು ತಿಳಿಸಿದ್ದಾರೆ.








