ಬೆಂಗಳೂರು: ಆನ್‍ಲೈನ್ ಶಿಕ್ಷಣದ ಹೆಸರಲ್ಲಿ ಬೆಂಗಳೂರಿನ ಖಾಸಗಿ ಶಾಲೆಗಳು ಪೋಷಕರಿಗೆ ಟಾರ್ಚರ್ ನೀಡುತ್ತಿವೆ. ಪ್ರತಿ ತಿಂಗಳು ಶುಲ್ಕ ಕಟ್ಟುವಂತೆ ಪೋಷಕರಿಗೆ ಒತ್ತಡ ಹೇರುತ್ತಿರುವ ಶಾಲೆಗಳು, ಶುಲ್ಕ ಕಟ್ಟದೇ ಹೋದ್ರೆ ಮಕ್ಕಳ ಟಿಸಿ ಕೊಡುವುದಾಗಿ ಬೆದರಿಕೆ ಹಾಕುವ ಹಂತಕ್ಕೆ ಬಂದು ನಿಂತಿವೆ.
ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಚೈತನ್ಯ ಶಾಲೆ ಹಾಗೂ ಬೆಂಗಳೂರು ಉತ್ತರ ತಾಲೂಕಿನ ಡೆಲ್ಲಿ ಪಬ್ಲಿಕ್ ಸ್ಕೂಲ್‍ಗಳು ಶುಲ್ಕ ಕಟ್ಟದ ವಿದ್ಯಾರ್ಥಿಗಳ ಆನ್‍ಕ್ಲಾಸ್‍ನ್ನೇ ಬಂದ್ ಮಾಡಿವೆ.
ಯಾವ ಮಕ್ಕಳ ಪೋಷಕರು ಫೀಸ್ ಕಟ್ಟಿಲ್ಲವೋ ಅವರ ಪೋರ್ಟಲ್ ಬಂದ್ ಮಾಡಿ ಆನ್‍ಲೈನ್ ಕ್ಲಾಸ್ ಮುಂದುವರೆಸಿವೆ. ಹೀಗಾಗಿ ಮಕ್ಕಳು ಹಾಗೂ ಪೋಷಕರು ಒತ್ತಡಕ್ಕೆ ಸಿಲುಕಿ ಪರದಾಡುತ್ತಿದ್ದಾರೆ.
ಮತ್ತೊಂದು ಕಡೆ ಎಲ್.ಕೆ.ಜಿ, ಯುಕೆಜಿ ಮಕ್ಕಳಿಗೂ ಫೀಸ್ ಕಟ್ಟುವಂತೆ ಒತ್ತಡ ಹೇರುತ್ತಿವೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ಆನ್‍ಲೈನ್ ಶಿಕ್ಷಣ ಸೇರಿದಂತೆ ತಿಂಗಳ ಶುಲ್ಕ ಕಟ್ಟುವಂತೆ ಒತ್ತಡ ಹಾಕುವ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದರು. ಜತೆಗೆ ಶಿಕ್ಷಣ ಇಲಾಖೆಯಿಂದ ಆದೇಶ ಕೂಡ ಹೊರಡಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಇಲಾಖೆಗೆ ದೂರುಗಳು ಬಂದರೂ ಒಂದೇ ಒಂದು ಶಾಲೆ ವಿರುದ್ಧ ಕ್ರಮಕೊಳ್ಳದೇ ಇರುವುದು ಅಧಿಕಾರಿಗಳ ಮೌನ ನಡೆಯ ಬಗ್ಗೆ ಅನುಮಾನ ಮೂಡಿಸುವಂತಾಗಿದೆ.
ಫೀಸ್ ಕಟ್ಟಲು ಡೆಡ್‍ಲೈನ್
ಆನ್‍ಲೈನ್ ತರಗತಿ ಕೇಳಲು ಫೀಸ್ ಕಟ್ಟಿಲ್ಲ ಅಂತಾ ಆನ್‍ಲೈನ್ ಕ್ಲಾಸ್ ಕ್ಲೋಸ್ ಮಾಡಿರುವ ಖಾಸಗಿ ಶಾಲೆಗಳು, ಪೋಷಕರಿಗೆ ಡೆಡ್‍ಲೈನ್ ಒಳಗೆ ಫೀಸ್ ಕಟ್ಟುವಂತೆ ತಾಕೀತು ಮಾಡಿವೆ. ಡೆಲ್ಲಿ ಪಬ್ಲಿಕ್ ಸ್ಕೂಲ್‍ನ ಉತ್ತರ ವಿಭಾಗದ ಆಡಳಿತ ಮಂಡಳಿ ಟರ್ಮ್ ಫೀಸ್ ಕಟ್ಟಿಲ್ಲವಾದ್ರೆ ಆನ್‍ಲೈನ್ ಕ್ಲಾಸ್ ಬ್ಲಾಕ್ ಮಾಡುತ್ತೇವೆ. ಪ್ರತಿ ಟರ್ಮ್ ಫೀಸ್ ಕಟ್ಟಲೇಬೇಕು ಎಂದು ಸೂಚನೆ ನೀಡಿದೆ.
ಕಳೆದ ಒಂದು ವಾರದಿಂದ ಮಕ್ಕಳ ಕ್ಲಾಸ್ ಕ್ಲೋಸ್ ಮಾಡಿರುವ ಶಾಲೆ, ಮುಂದಿನ ಟರ್ಮ್ ಫೀಸ್ ಕಟ್ಟೋದಕ್ಕೂ ಮೊದಲು, ಮೊದಲ ಟರ್ಮ್ ಫೀಸ್ ಕಟ್ಟಲೇಬೇಕು ಎಂದು ಕಟ್ಟಪ್ಪಣೆ ಮಾಡಿದೆ ಎಂದು ಡೆಲ್ಲಿ ಪಬ್ಲಿಕ್ ಶಾಲೆಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.