ನವದೆಹಲಿ: ತೀವ್ರ ವಿರೋಧದ ಬಳಿಕ 20 ವರ್ಷಗಳ ಕಾಲ ದೆಹಲಿಯ ಲೋದಿ ಎಸ್ಟೇಟ್‍ನಲ್ಲಿರುವ ಸರ್ಕಾರಿ ಬಂಗಲೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ತೆರವು ಮಾಡಿದ್ದಾರೆ.
ಈ ಹಿಂದಿನ ಸರ್ಕಾರಗಳು ಪ್ರಿಯಾಂಕ ಗಾಂಧಿಗೆ ಎಸ್‍ಪಿಜಿ ಭದ್ರತೆ ನೀಡಿದ್ದವು. ಎಸ್‍ಪಿಜಿ ಭದ್ರತೆ ಹೊಂದಿದ್ದ ಕಾರಣಕ್ಕಾಗಿ ದೆಹಲಿಯಲ್ಲಿ ಅತ್ಯಂತ ಶ್ರೀಮಂತ ಏರಿಯಾ ಹಾಗೂ ಪ್ರಧಾನಿ, ರಾಷ್ಟ್ರಪತಿಗಳು ವಾಸ ಮಾಡುವ ಭಾರಿ ಭದ್ರತೆ ಹೊಂದಿರುವ ಲೋದಿ ಎಸ್ಟೇಟ್‍ನಲ್ಲಿ ಪ್ರಿಯಾಂಕ ಗಾಂಧಿಗೆ ಸರ್ಕಾರಿ ಬಂಗಲೆ ನೀಡಲಾಗಿತ್ತು.
ಕೆಲ ತಿಂಗಳ ಹಿಂದೆ ಸುಪ್ರೀಂಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಎಸ್‍ಪಿಜಿ ಭದ್ರತೆ ಇಲ್ಲದವರಿಗೂ ಅನಧಿಕೃತವಾಗಿ ಲೋದಿ ಎಸ್ಟೇಟ್‍ನಲ್ಲಿ ಸರ್ಕಾರಿ ಬಂಗಲೆಯಲ್ಲಿ ವಾಸವಾಗಿದ್ದಾರೆ. ಅವರನ್ನು ತೆರವು ಮಾಡುವಂತೆ ಆಗ್ರಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್, ಪ್ರಿಯಾಂಕ ಗಾಂಧಿ ಅವರು ಸರ್ಕಾರಿ ಬಂಗಲೆ ತೆರವು ಮಾಡುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು.
ಪ್ರಿಯಾಂಕ ಗಾಂಧಿಗೆ ಸರ್ಕಾರಿ ಬಂಗಲೆ ನೀಡಿರುವುದು ಹಾಗೂ 20 ವರ್ಷಗಳಿಂದ ಬಂಗಲೆಯಲ್ಲೇ ವಾಸ್ತವ್ಯ ಹೂಡಿರುವುದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು.
ಮೋದಿ ಪ್ರಧಾನಿಯಾದ ಮೇಲೆ ಪ್ರಿಯಾಂಕ ಗಾಂಧಿ ನೀಡಿದ್ದ ಎಸ್‍ಪಿಜಿ ಭದ್ರತೆಯನ್ನೂ ವಾಪಸ್ ಪಡೆಯಲಾಗಿತ್ತು. ಆಗಸ್ಟ್ 1ರೊಳಗೆ ಬಂಗಲೆ ತೆರವು ಮಾಡುವಂತೆ ಕೇಂದ್ರ ಲೋಕೋಪಯೋಗಿ ಇಲಾಖೆ ಗಡುವು ನೀಡಿತ್ತು. ಗಡುವು ಸಮೀಪಿಸುವ ಮುನ್ನವೇ ಪ್ರಿಯಾಂಕ ಗಾಂಧಿ ಸರ್ಕಾರಿ ಬಂಗಲೆ ತೆರವು ಮಾಡಿದ್ದಾರೆ.
ಸದ್ಯ ದೆಹಲಿಯಲ್ಲಿ ಹೊಸ ಮನೆ ಕಟ್ಟಿಸುತ್ತಿರುವ ಪ್ರಿಯಾಂಕ, ಅಲ್ಲಿಯವರೆಗೆ ನೊಯ್ಡಾದ ಪೆಂಟಾಹೌಸ್‍ಗೆ ಶಿಫ್ಟ್ ಆಗಿದ್ದಾರೆ.
ಲೋದಿ ಎಸ್ಟೇಟ್‍ನ ಬಂಗಲೆಗೆ ಕಟ್ಟಬೇಕಿದ್ದ ಬಾಡಿಗೆ, ತೆರಿಗೆ, ವಿದ್ಯುತ್ ಬಿಲ್ ಹಾಗೂ ನೀರಿನ ಬಿಲ್‍ನ್ನು ಕಟ್ಟಿ ಕ್ಲಿಯರ್ ಮಾಡಲಾಗಿದೆ. ಎಷ್ಟೇಟ್ ತೆರವು ಮಾಡುವ ಮುನ್ನ ಸುಣ್ಣ-ಬಣ್ಣ ಮಾಡಿ ಖಾಲಿ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಎಸ್ಟೇಟ್‍ನ ಬೀಗವನ್ನು ಲೋಕೋಪಯೋಗಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಮನೆಯಲ್ಲಿ ಯಾವುದೇ ವಸ್ತುಗಳೂ ಹಾಳಾಗಿಲ್ಲ, ಎಲ್ಲವೂ ಸುಸ್ಥಿತಿಯಲ್ಲಿವೆ ಎಂದು ಅಧಿಕಾರಿಗಳು ಕನ್ಫರ್ಮ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಕೆಲ ದಿನಗಳ ಹಿಂದಷ್ಟೇ ಲೋದಿ ಎಸ್ಟೇಟ್‍ನ ಸರ್ಕಾರಿ ಬಂಗಲೆಯನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತೆರವು ಮಾಡಿದ್ದರು. ಆದರೆ, ಬಂಗಲೆ ತೆರವು ಮಾಡುವಾಗ ಇಡೀ ಮನೆ ಹಾಳಾಗಿತ್ತು. ಟೈಲ್ಸ್ ಸೇರಿದಂತೆ ವಿದ್ಯುತ್ ಬಲ್ಬ್‍ಗಳನ್ನು ತೆಗೆದುಕೊಂಡು ಹೋಗಿದ್ರು ಎನ್ನಲಾಗಿದೆ.