ಬೆಂಗಳೂರು: ರಾಜ್ಯದ ಜನತೆಗೆ ಕಂದಾಯ ಇಲಾಖೆಯು ಬಹುದೊಡ್ಡ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಆಸ್ತಿ ದಾಖಲೆಗಳಿಗಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಸಂಕಷ್ಟ ತಪ್ಪಲಿದ್ದು, ನೇರವಾಗಿ ಮೊಬೈಲ್ ಫೋನ್‌ಗೇ ಅಧಿಕೃತ ದಾಖಲೆಗಳು ತಲುಪಲಿವೆ. ಈ ಮಹತ್ವದ ಬದಲಾವಣೆಯ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ.
ಭೂ ಸುರಕ್ಷಾ ಯೋಜನೆ: ದಾಖಲೆಗಳ ರಕ್ಷಣೆಗೆ ಹೊಸ ಕವಚ
ಆಸ್ತಿಯ ಮೂಲ ದಾಖಲೆಗಳು ಹಳೆಯದಾಗಿ ಶಿಥಿಲಗೊಳ್ಳುವುದು, ಕಿಡಿಗೇಡಿಗಳಿಂದ ನಕಲು ಅಥವಾ ಫೋರ್ಜರಿ ಆಗುವುದು ಮತ್ತು ಉದ್ದೇಶಪೂರ್ವಕವಾಗಿ ದಾಖಲೆಗಳನ್ನು ತಿದ್ದುವ ಪ್ರವೃತ್ತಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ತಾಲ್ಲೂಕು ಕಚೇರಿ, ಎ.ಸಿ. ಮತ್ತು ಡಿ.ಸಿ. ಕಚೇರಿಗಳಲ್ಲಿರುವ ದಶಕಗಳ ಹಳೆಯ ಮೂಲ ಕಡತಗಳನ್ನು ಅತ್ಯಾಧುನಿಕ ಸ್ಕ್ಯಾನಿಂಗ್ ತಂತ್ರಜ್ಞಾನದ ಮೂಲಕ ಡಿಜಿಟಲೀಕರಣ ಮಾಡಲಾಗುತ್ತಿದೆ.
ನೂರು ತಾಲೂಕುಗಳಲ್ಲಿ ಪ್ರಕ್ರಿಯೆ ಪೂರ್ಣ
ಈಗಾಗಲೇ ರಾಜ್ಯದ 100 ತಾಲ್ಲೂಕುಗಳಲ್ಲಿ ಈ ಸ್ಕ್ಯಾನಿಂಗ್ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಏಪ್ರಿಲ್ 30ರ ವೇಳೆಗೆ ಅಂದಾಜು 67 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ಸುರಕ್ಷಿತವಾಗಿ ಸಂಗ್ರಹಿಸಲಾಗಿದೆ. ಇನ್ನುಳಿದ ತಾಲ್ಲೂಕುಗಳ ಕೆಲಸವೂ ವೇಗವಾಗಿ ನಡೆಯುತ್ತಿದ್ದು, ಮುಂದಿನ ಒಂದು ವರ್ಷದೊಳಗೆ ರಾಜ್ಯಾದ್ಯಂತ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಮನೆಯಲ್ಲೇ ಕುಳಿತು ಪಡೆಯಿರಿ ಸರ್ಟಿಫೈಡ್ ಕಾಪಿ
ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ಪ್ರಮಾಣೀಕೃತ ದಾಖಲೆಗಳನ್ನು ಪಡೆಯಲು ಇನ್ನು ಮುಂದೆ ಕಚೇರಿಗಳ ಮುಂದೆ ಸಾಲು ನಿಲ್ಲಬೇಕಿಲ್ಲ. ಭೂ ಸುರಕ್ಷಾ ಯೋಜನೆಯಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಸಾಕು, ಸಂಬಂಧಪಟ್ಟ ದಾಖಲೆಗಳು ನೇರವಾಗಿ ಅರ್ಜಿದಾರರ ಮೊಬೈಲ್ ಫೋನ್‌ಗೆ ರವಾನೆಯಾಗಲಿವೆ. ಇದು ಸಾರ್ವಜನಿಕರ ಸಮಯ ಮತ್ತು ಹಣವನ್ನು ಉಳಿಸುವುದಲ್ಲದೆ, ಮಧ್ಯವರ್ತಿಗಳ ಕಾಟವನ್ನೂ ತಪ್ಪಿಸಲಿದೆ.
ಅಕ್ರಮಗಳಿಗೆ ಬೀಳಲಿದೆ ಶಾಶ್ವತ ಬೀಗ
ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವುದರಿಂದ ಅವುಗಳನ್ನು ಕದಿಯಲು ಅಥವಾ ನಾಶಪಡಿಸಲು ಸಾಧ್ಯವಿಲ್ಲ. ದಾಖಲೆಗಳನ್ನು ಅಡಗಿಸಿಡುವ ಅಥವಾ ಎತ್ತಿಡುವ ಪ್ರಯತ್ನಗಳಿಗೂ ಇಲ್ಲಿ ಅವಕಾಶವಿಲ್ಲ. ಒಮ್ಮೆ ಸ್ಕ್ಯಾನ್ ಆದ ಮೇಲೆ ಮೂಲ ಕಡತದಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಾಗದ ಕಾರಣ, ಭೂ ಮಾಫಿಯಾ ಮತ್ತು ಫೋರ್ಜರಿ ದಂಧೆಗೆ ದೊಡ್ಡ ಹೊಡೆತ ಬೀಳಲಿದೆ.
ಮುಂದಿನ ಗುರಿ: ಸರ್ವೆ ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿ
ಈ ಯೋಜನೆಯನ್ನು ಕೇವಲ ಕಂದಾಯ ಕಚೇರಿಗಳಿಗೆ ಸೀಮಿತಗೊಳಿಸದೆ, ಮುಂದಿನ ವರ್ಷ ಸರ್ವೆ ಇಲಾಖೆ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿನ ಮೂಲ ದಾಖಲೆಗಳನ್ನೂ ಸ್ಕ್ಯಾನ್ ಮಾಡಲು ಸರ್ಕಾರ ಉದ್ದೇಶಿಸಿದೆ. ಇದರಿಂದ ಇಡೀ ಭೂ ದಾಖಲೆಗಳ ವ್ಯವಸ್ಥೆ ಪಾರದರ್ಶಕವಾಗಲಿದ್ದು, ಪ್ರತಿಯೊಬ್ಬ ನಾಗರಿಕನಿಗೂ ತನ್ನ ಆಸ್ತಿಯ ಹಕ್ಕಿನ ರಕ್ಷಣೆ ಸಿಗಲಿದೆ ಎಂದು ಕೃಷ್ಣ ಬೈರೇಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.







